ಕರ್ನಾಟಕದಲ್ಲಿ ನಾವು ಸುಮ್ಮನೆ ಇದ್ದರೂ ಗೆಲ್ತೀವಿ: ಸಿದ್ದರಾಮಯ್ಯ | JANATA NEWS

ಬೆಂಗಳೂರು : ಗುಜರಾತ್ ಚುನಾವಣೆ ಫಲಿತಾಂಶ ಮುಂಬರುವ ಕರ್ನಾಟಕದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಲ್ಲಿ ನಾವು ಸುಮ್ಮನಿದ್ರೂ ಗೆಲ್ಲುತ್ತೇವೆ. ನಾವು ಯಾವ ತಂತ್ರಗಾರಿಕೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗಿದ್ದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ ಮತ್ತು ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿತ್ತು. ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ಇಲ್ಲ, ನನಗಿರುವ ಮಾಹಿತಿ ಪ್ರಕಾರ ಬಿಜೆಪಿ ಪಕ್ಷವೇ ಆಮ್ ಆದ್ಮಿ ಪಕ್ಷಕ್ಕೆ ಹಣ ನೀಡಿ ಕಾಂಗ್ರೆಸ್ನ ಮತಗಳನ್ನು ಒಡೆಯುವ ತಂತ್ರ ಮಾಡಿದೆ. ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಇಲ್ಲ. ಹಾಗಾಗಿ ಜೆಡಿಎಸ್ ಜೊತೆ ಬಿಜೆಪಿ ರಾಜ್ಯದಲ್ಲಿ ತಂತ್ರಗಾರಿಕೆ ಮಾಡಬಹುದು. ಆದರೆ ಇದರಿಂದ ಯಾವ ಲಾಭವೂ ಆಗಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲೇ ಬೇರೆ ರೀತಿಯ ವಿಚಾರಗಳು ಇವೆ, ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ. ಇಲ್ಲಿನ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆ ಇವುಗಳು ಮುಖ್ಯವಾದುದು. ಲಂಚ ನೀಡದೆ ಯಾವ ಕೆಲಸಗಳು ಇಲ್ಲಿ ಆಗುತ್ತಿಲ್ಲ, 40% ಕಮಿಷನ್ ಗುಜರಾತ್ ನಲ್ಲಿ ಇದೆ ಎಂದು ಯಾರಾದರೂ ಹೇಳಿದ್ದರಾ? ಇದು ಇರುವುದು ರಾಜ್ಯದಲ್ಲಿ ಎಂದು ವ್ಯಂಗ್ಯವಾಡಿದರು.
ಇನ್ನು ಒಂದು ರಾಜ್ಯದ ಚುನಾವಣಾ ಫಲಿತಾಂಶದ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸಲ್ಲ. ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಇಲ್ಲಿರುವ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರವಾಗಿದೆ. ಕಾಂಗ್ರೆಸ್ ಪಕ್ಷದ ಸಂಘಟನೆ ಇಲ್ಲಿ ತುಂಬಾ ಶಕ್ತಿಯುತವಾಗಿದೆ. ಗುಜರಾತ್ ಅನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಬೇಡಿ. ಕರ್ನಾಟಕದಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೆ ಗೊತ್ತಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತದೆ. ನಾವು ಏನೂ ತಂತ್ರಗಾರಿಕೆ ಮಾಡುವುದೆ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದೆಹಲಿಯಲ್ಲಿ ಯಾಕೆ ಸೋಲುತ್ತಿದ್ದರು. ಎಲ್ಲಿ ಹೋಯ್ತು ಮೋದಿ ಹವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.