ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ! | JANATA NEWS
ಬೆಂಗಳೂರು : ಈ ವರ್ಷ ಮಾತ್ರ ಸಿಇಟಿ ( CET ) ಮತ್ತು ಕಾಮೆಡ್-ಕೆ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ ಇರುತ್ತದೆ. ಈ ಸಂಬಂಧ ಒಡಂಬಡಿಕೆ ಆಗಲಿದೆ ಎಂದು ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಕುಪೆಕಾ ಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಜಂಟಿ ಸಭೆಯ ಬಳಿಕ ಮಾತನಾಡಿದ ಅಶ್ವತ್ಥ ನಾರಾಯಣ, ವಿಲೀನ ವಿಧಿ-ವಿಧಾನ, ಒಂದೇ ಪರೀಕ್ಷೆ ವಿಧಾನ, ಪರಸ್ಪರ ತಿಳಿವಳಿಕೆ ಪತ್ರ ಸಿದ್ಧತೆ ಮುಂತಾದ ಪೂರ್ವಭಾವಿ ಪ್ರಕ್ರಿಯೆಗಳನ್ನು ಇಲಾಖೆ ನಿರ್ವಹಿಸಲಿದ್ದು, ಒಪ್ಪಂದದ ಬಳಿಕ ಜಾರಿಗೆ ತರಬೇಕಿರುವ ಕಾರಣ ಕಾಲಾವಕಾಶ ಹಿಡಿಯಲಿದ್ದು, ಮುಂದಿನ ವರ್ಷದಿಂದ ಜಾರಿಯಾಗಲಿದೆ ಎಂದು ತಿಳಿಸಿದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 10 ರಷ್ಟು ಫೀಸ್ ಹೆಚ್ಚಳ ಕುರಿತು ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಂದ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ಧಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮಿಡ್-ಕೆ ಮಾಡಲಾಗುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ.