1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ | JANATA NEWS

ಬೆಂಗಳೂರು : ಬೆಂಗಳೂರಿನ ಬೃಹತ್ ಮಳೆ ನೀರು ಕಾಲುವೆ ಗಳನ್ನು 1600 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಬೆಳಗ್ಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆ ಆಗಿದೆ. ಕಳೆದ ನಲವತ್ತು ವರ್ಷಗಳಲ್ಲೇ ಈ ರೀತಿ ಮಳೆ ಇದೇ ಮೊದಲು ಬಂದಿದೆ. ಇದರಿಂದ ಬಹಳ ಜನರಿಗೆ ತೊಂದರೆಯಾಗಿದೆ. ಮೇ ತಿಂಗಳಲ್ಲಿ 15 ದಿನ ಬರಬೇಕಾದ ಮಳೆ, ಒಂದೇ ದಿನದ ನಾಲ್ಕು ಗಂಟೆಯಲ್ಲಿ ಸುರಿದಿದೆ ಎಂದರು.
ಎಲ್ಲಾ ತಗ್ಗು ಪ್ರದೇಶಗಳಲ್ಲಿ ಸಹಜವಾಗಿ ಮಳೆ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಮಳೆ ಬಿದ್ದಾಗ ಪ್ರವಾಹವು ಕಳೆದ ಮೂರು ನಾಲ್ಕು ದಶಕಗಳಿಂದ ಆಗುತ್ತಿದೆ. ಇದ್ದಕ್ಕೆ ಒಂದೆಡೆ ಹಲವಾರು ಪರಿಹಾರಗಳಾಗುತ್ತಿದ್ದರೂ, ಮತ್ತೊಂದೆಡೆ ನಗರ ಬೆಳೆಯುತ್ತಿದೆ. ಪರಿಹಾರಗಳೂ ಸಮಗ್ರವಾಗಿ ಪ್ರವಾಹದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು.
ಕಳೆದ ಬಾರಿ ಮಳೆಯಾದಾಗ ಎಲ್ಲಾ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿ ಹಲವು ತೀರ್ಮಾನಗಳನ್ನು ಮಾಡಿದ್ದೆವು. ಈ ಪೈಕಿ ಮಳೆ ನೀರು ಕಾಲುವೆಗಳನ್ನು ಅಭಿವೃದ್ಧಿ ಮಾಡುವುದು ಎಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಡಿಪಿಆರ್ ಸಿದ್ಧವಾಗಿ ಬಜೆಟ್ನಲ್ಲಿ ಈಗಾಗಲೇ ಅನುಮೋದನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಡಿಪಿಆರ್ ಪೂರ್ಣಗೊಂಡ ಕೂಡಲೆ ಅನುಮೋದನೆ ನೀಡಿ ಕೆಲಸ ಪ್ರಾರಂಭಿಸಲಾಗುವುದು ಎಂದರು.
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಆಗಬೇಕಿದ್ದು, ಸಮೀಕ್ಷೆ ಕಾರ್ಯ, ಅಂದಾಜು, ವಿನ್ಯಾಸಗಳು ,ಅಡಚಣೆಯ ಸ್ಥಳಗಳನ್ನು ಗುರುತಿಸುವ ಮೂಲ ಕೆಲಸಗಳನ್ನು ಮಾಡಲು ಡಿಪಿಆರ್ ಅನುಮೋದನೆಯಾಗಿದ್ದು ಕಾಮಗಾರಿ ಪ್ರಾರಂಭವಾಗುತ್ತದೆ. ರಾಜಕಾಲುವೆ ವ್ಯಾಪ್ತಿಯಲ್ಲಿರುವ ಮನೆಗಳನ್ನುತೆರವುಗೊಳಿಸಬೇಕಿದೆ.
ಭಾರಿ ಪ್ರಮಾಣದ ಮಳೆಯಿಂದ 300 ಅಡಿಯ ರಾಜಕಾಲುವೆಯನ್ನೂ ಮೀರಿ ನೀರು ಹರಿದಿದೆ. ಈ ಕಾಲುವೆಗಳು ಹಳೆಯದಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಮಳೆನೀರು ಮತ್ತು ಚರಂಡಿ ನೀರನ್ನು ತಡೆಯಲು ಸಾಧ್ಯವಾಗುವುದಿಲ್ಲ. ರಾಜಕಾಲುವೆಗಳನ್ನು ದೊಡ್ಡದು ಮಾಡುವ ಕೆಲಸವಾಗಬೇಕು. ಎಸ್ಟಿಪಿ ಘಟಕಗಳನ್ನು ಹೆಚ್ಚಿಸಲಾಗುವುದು. ಮಳೆ ನೀರು ಕಾಲುವೆಗಳಿಗೆ ಎಸ್ಟಿಪಿ ಘಟಕಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿಗಳು ಬೆಂಗಳೂರು ನಗರದ ಪೂರ್ವ ಮತ್ತು ಪಶ್ಚಿಮ ವಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀವ್ರ ಸ್ವರೂಪದಲ್ಲಿ ಹಾನಿಗೊಳಗಾಗಿರುವ ಕುರುಬರ ಹಳ್ಳಿ ಮತ್ತು ಲಗ್ಗೆರೆ ಪ್ರದೇಶಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದರು.