ಸಿದ್ದರಾಮಯ್ಯ ಮಗ ಮಾತ್ರವಲ್ಲ, ಡಿಕೆ ಮನೆಯಿಂದಲೂ ಮುಂದೆ ಬಿಜೆಪಿಗೆ ಸೇರಲಿದ್ದಾರೆ: ನಳಿನ್ ಕುಮಾರ್ ಕಟೀಲ್ | JANATA NEWS

ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಆಗಿದ್ದ ವಾಸು ಅವರ ಪುತ್ರ ಕವೀಶ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಬಿಜೆಪಿ ಚಿಂತನೆ ಅರಳಿದೆ. ನಾಳೆ ಸಿದ್ದರಾಮಯ್ಯ ಅವರ ಮಗ, ಡಿಕೆ ಶಿವಕುಮಾರ್ ಅವರ ಕುಟುಂಬ ಕೂಡಾ ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕಾಂಗ್ರೆಸ್ ಯುವ ಮುಖಂಡ ಕವೀಶ್‍ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ರೈತ ಸಂಘಟನೆ ಜಿಲ್ಲಾಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ. ರಾಜಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ ಪುಣ್ಯವತಿ ನಾಗರಾಜ್ ಇಂದು ಬಿಜೆಪಿ ಸೇರಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂದ ಮುಖಂಡರು ಮತ್ತು ಬೆಂಬಲಿಗರನ್ನು ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಾಂಗ್ರೆಸ್ ನವರ ಬಸ್ ಹೊರಟಿದೆ. ಹೋಗ್ತಾ, ಹೋಗ್ತಾ ಬ್ರೇಕ್ ಫೇಲ್ ಆಗಲಿದೆ. ಜೆಡಿಎಸ್ ಪಂಚರತ್ನ ಯಾತ್ರೆಯೂ ಪಂಕ್ಚರ್ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವ್ಯಂಗ್ಯವಾಡಿದರು.
ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದೇಗೆಲ್ಲಲಿದೆ. ಈ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಆಗಿಲ್ಲ. ಒಬ್ಬ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಅವರ ಮಗ ಬಿಜೆಪಿ ಸೇರಿದಂತೆ, ಮುಂದಿನ ದಿನದಲ್ಲಿ ಸಿದ್ರಾಮಣ್ಣನ ಮಗನೂ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿ ಮನೆತನ ಅಥವಾ ಕುಟುಂಬ ರಾಜಕಾರಣ ಮಾಡುವುದಿಲ್ಲ. ಇದರಿಂದಾಗಿ ಚಹಾ ಮಾರುವವರು ದೇಶದ ಪ್ರಧಾನಿಯಾಗುತ್ತಾರೆ. ಹಳ್ಳಿಗಳಲ್ಲಿ ಪಕ್ಷದ ಭಿತ್ತಿ ಪತ್ರ ಅಂಟಿಸಿದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ. ಕುಟುಂಬ, ಪರಿವಾರ ವಾದಕ್ಕೆ ರೋಸಿ ಹೋದವರು ರಾಷ್ಟ್ರೀಯ ವಾದದ ಪಕ್ಷಕ್ಕೆ ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದರು.