ಮೇ 10 ಮತದಾನದ ದಿನ ಅಲ್ಲ, ಭ್ರಷ್ಟಾಚಾರ ತೆಗೆದುಹಾಕುವ ದಿನ: ಡಿ ಕೆ ಶಿವಕುಮಾರ್ | JANATA NEWS

ಬೆಂಗಳೂರು : ಮೇ 10ರಂದು ಚುನಾವಣಾ ದಿನಾಂಕ ಪ್ರಕಟವಾಗಿದ್ದು, ರಾಜ್ಯಕ್ಕೆ ಹೊಸ ಸರ್ಕಾರ ತರಲು ದಿನಾಂಕ ಘೋಷಣೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ,ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರದ ಮಾಜಿ ಸಚಿವ ಆನಂದ ಶರ್ಮಾ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಮೇ 10ಕ್ಕೆ ಚುನಾವಣೆ ಘೋಷಣೆ ಆಗಿದೆ. ರಾಜ್ಯ, ಕೇಂದ್ರ ಸರ್ಕಾರಗಳು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡ ಬಳಿಕ ಕೊನೆಗೂ ಶುಭ ದಿನ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಿಸಿದೆ ಎಂದು ಹೇಳಿದರು.
ಮೇ 10 ಮತದಾನದಿನ ಅಲ್ಲ, ಭ್ರಷ್ಟಾಚಾರ ಬಡಿದೊಡಿಸುವ ದಿನ. ಹೊಸ ನಾಡು ಕಟ್ಟುವಂತ ದಿನ. ನವ ಕರ್ನಾಟಕದ ಹೊಸ ದಿಕ್ಕು ಕೊಡುವ ದಿನ. ಡಬಲ್ ಇಂಜಿನ್ ಫೇಲ್ ಆಗಿದೆ, ಹೊಸ ಇಂಜಿನ್ ತಾಯರಾಗುತ್ತದೆ. ಮೇ 10 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರ ಭವಿಷ್ಯ ನಿರ್ಮಾಣ ಮಾಡುವ ದಿನ ಎಂದು ಹೇಳಿದರು.
ಹೊಸಸಂಕಲ್ಪ ಮಾಡುವ ದಿನ ಅಂದು ಬರಲಿದೆ. ಕಾಂಗ್ರೆಸ್ ಪ್ರಗತಿ ತರಲಿದೆ. ಒಂದೇ ಹಂತದ ಈ ಚುನಾವಣೆಯನ್ನು ಸ್ವಾಗತಿಸುತ್ತೇವೆ. ಚುನಾವಣಾ ಆಯೋಗ ತಿಳಿಸಿರುವ ಬದಲಾವಣೆಯನ್ನು ನಾವು ಜನರಿಗೆ ವಿವರಿಸುತ್ತೇವೆ ಎಂದು ಡಿಕೆಶಿ ಹೇಳಿದರು.
ಆಡಳಿತ ಪಕ್ಷದ ಅಡಿಯಾಳಾಗಿ ಯಾರೂ ಇರಲ್ಲ. ಜನರು ಇಷ್ಟು ದಿನದ ಅನ್ಯಾಯಕ್ಕೆ ಕಡಿವಾಣ ಬೀಳಲಿದೆ. ಉತ್ತಮ ಸರ್ಕಾರಕ್ಕೆ ಜನ ನಾಂದಿ ಹಾಡುತ್ತಾರೆ. ಬಿಜೆಪಿ ಸ್ಪಷ್ಟ ಅಧಿಕಾರಕ್ಕೆ ಬರುವುದಾಗಿದ್ದರೆ ಮೋದಿ ದಿನಾ ಯಾಕೆ ಇಲ್ಲಿ ಬರುತ್ತಿದ್ದರು. ಮನೆ ಮನೆಗೆ ಯಾಕೆ ಭೇಟಿ ಕೊಡುತ್ತಿದ್ದಾರೆ. ಭಯ ಅವರಲ್ಲಿ ಕಾಣುತ್ತಿದೆ. 40% ಸರ್ಕಾರದ ಅಬ್ಬರ ನಿಲ್ಲಲಿದೆ. ಜನ ನೆಮ್ಮದಿ ಕಾಣಲಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಗುಜರಾತಿನ ಇವಿಎಂ ಬೇಡ ಎಂದು ನಾವು ಪತ್ರ ಬರೆದಿದ್ದೆವು. ಈಗ ನಮ್ಮನ್ನು ಕರೆದಿದ್ದು, ಚುನಾವಣಾ ಆಯೋಗದೊಂದಿಗೆ ಮಾತನಾಡುತ್ತೇವೆ. ಇವಿಎಂ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸುತ್ತೇವೆ. ಹೊಸ ಇವಿಎಂಗೆ ಸ್ವಾಗತ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.