ದೈವನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು | JANATA NEWS

ಮಂಗಳೂರು : ದೈವ ನರ್ತನ ಮಾಡುತ್ತಿರುವಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಇಹಲೋಕ ತ್ಯಜಿಸಿರುವ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು ಅಜಿಲ (59) ಸಾವನ್ನಪ್ಪಿದ ದೈವ ನರ್ತಕ.
ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿನ ದೈವಾರಾಧಕರಾಗಿ ಹಾಗೂ ಗ್ರಾಮದೈವಗಳ ಪರಿಚಾರಕರಾಗಿ ಇವರು ಸೇವೆ ಸಲ್ಲಿಸುತ್ತಿದ್ದರು.
ಮಾ.30 ರಂದು ರಾತ್ರಿ 2 ಗಂಟೆ ಸುಮಾರಿಗೆ ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು.ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಎರಡು ದೈವಗಳ ನರ್ತನ ಸೇವೆ ಏಕ ಕಾಲದಲ್ಲಿ ನಡೆಯುತ್ತಿತ್ತು. ಭಕ್ತರು ಸುತ್ತಲೂ ಕುಳಿತು ನೋಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕಾಂತು ಅಜಿಲ ನರ್ತನ ಸೇವೆಯಲ್ಲಿ ತಲ್ಲೀನರಾಗಿದ್ದಾಗಲೇ ಕುಸಿದು ಬಿದ್ದರು. ತಕ್ಷಣ ನೆರೆದ ಭಕ್ತರು ಧಾವಿಸಿ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ, ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ದೈವ ನರ್ತಕನ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.