ಮಹಿಳಾ ಹಕ್ಕು ಗೌರವಿಸುವ ಆಶ್ವಾಸನೆ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಸಹ-ಶಿಕ್ಷಣ ನಿಷೇಧ | ಜನತಾ ನ್ಯೂಸ್
ಕಾಬೂಲ್ : ತಾಲಿಬಾನ್ ಅಧಿಕಾರಿಗಳು ಷರಿಯಾ ಕಾನೂನಿನ ಪ್ರಕಾರ ಶನಿವಾರ ತಮ್ಮ ಮೊದಲ "ಫತ್ವಾ"ವನ್ನು ಹೊರಡಿಸಿದ್ದು, ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಸಹ-ಶಿಕ್ಷಣವನ್ನು ಸಮಾಜದ ಎಲ್ಲ ಅನಿಷ್ಟಗಳ ಮೂಲ ಎಂದು ಬಣ್ಣಿಸಿದ್ದು, ಸಹ-ಶಿಕ್ಷಣವನ್ನು ನಿಷೇಧಿಸಿದ್ದಾರೆ.
ಕಳೆದ ವಾರ ಅಫ್ಘಾನಿಸ್ತಾನವನ್ನು ತ್ವರಿತವಾಗಿ ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಹೊರಡಿಸಿದ ಮೊದಲ ಫತ್ವಾ ಇದಾಗಿದೆ.
ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳನ್ನು ಗೌರವಿಸುವುದಾಗಿ ಭಯೋತ್ಪಾದಕ ಗುಂಪು ಆಶ್ವಾಸನೆ ನೀಡಿದ ಬೆನ್ನಲ್ಲೇ ಇಂತಹ ತದ್ವಿರುದ್ಧ ಘೋಷಣೆ ಬಂದಿದೆ. ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು, ಖಾಸಗಿ ಸಂಸ್ಥೆಗಳ ಮಾಲೀಕರು ಮತ್ತು ತಾಲಿಬಾನ್ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರೊಂದಿಗೆ, ಮೂರು ಗಂಟೆಗಳ ಸಭೆ ನಡೆಸಿದ ತಾಲಿಬಾನ್ ಪ್ರತಿನಿಧಿ ಮತ್ತು ಅಫ್ಘಾನಿಸ್ತಾನದ ಉನ್ನತ ಶಿಕ್ಷಣದ ಮುಖ್ಯಸ್ಥ ಮುಲ್ಲಾ ಫರೀದ್, ಅಂತಿಮವಾಗಿ ಯಾವುದೇ ಪರ್ಯಾಯವಿಲ್ಲ ಮತ್ತು ಸಹ-ಶಿಕ್ಷಣವನ್ನು ಕೊನೆಗೊಳಿಸಬೇಕು, ಎಂದು ಹೇಳಿದ್ದಾರೆ. ಸದ್ಗುಣಶೀಲ ಮಹಿಳಾ ಉಪನ್ಯಾಸಕರಿಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಕಲಿಸಲು ಅವಕಾಶವಿದೆ, ಆದರೆ ಪುರುಷರಿಗೆ ಮಾತ್ರ ಕಲಿಸಲಾಗುವುದಿಲ್ಲ, ಎಂದು ಅವರು ಹೇಳಿದರು.