ಶೌಚಾಲಯದ ಒಳಗೆ ತನ್ನ ಪ್ಯಾಂಟ್ನ್ನೇ ಬಳಸಿ ನೇಣಿಗೆ ಶರಣಾದ ಅತ್ಯಾಚಾರದ ಆರೋಪಿ! | ಜನತಾ ನ್ಯೂಸ್
ವಿಜಯಪುರ : ವಿಜಯಪುರ ಜಿಲ್ಲೆಯ ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶೌಚಾಲಯಕ್ಕೆ ಹೋಗಿದ್ದ ವೇಳೆ ಪ್ಯಾಂಟ್ ಬಳಸಿ ನೇಣಿಗೆ ಶರಣಾಗಿದ್ದಾನೆ.
ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷದ ಬಾಲಕಿ ಮೇಲೆ ಡಾಬಾ ಮಾಲೀಕನೇ ಅತ್ಯಾಚಾರವೆಸಗಿದ್ದ. ನಿನ್ನೆ ಸಂಜೆ ಈ ಘಟನೆ ನಡೆದಿತ್ತು. ಈ ಸಂಬಂಧ ಬಾಲಕಿಯ ತಂದೆ ದೇವಿಂದ ಸಂಗೋಗಿ ಎಂಬ ಡಾಬಾ ಮಾಲೀಕನ ವಿರುದ್ಧ ದೂರು ನೀಡಿದ್ದರು. ದೂರು ನೀಡುತ್ತಲೇ ಆತ ಸ್ಥಳದಿಂದ ಪರಾರಿಯಾಗಿದ್ದ.
ತೀವ್ರಗತಿಯಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ತಡರಾತ್ರಿ ಆತನನ್ನು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಈಗ ವಿಚಾರಣೆ ವೇಳೆ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಪೋಕ್ಸೋ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ತಡರಾತ್ರಿ ಆರೋಪಿಯ ಬಂಧನವಾಗಿತ್ತು. ನಸುಕಿನ ಜಾವ ಶೌಚಗೃಹಕ್ಕೆ ತೆರಳಿದ್ದ ಆರೋಪಿ ಅಲ್ಲಿ ನೇಣು ಹಾಕಿಕೊಂಡಿದ್ದಾನೆ. ಇದನ್ನು ಕಂಡ ನಮ್ಮ ಸಿಬ್ಬಂದಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಮೃತಪಟ್ಟಿದ್ದಾನೆ ಎಂದಿದ್ದಾರೆ.
ಲಾಕಪ್ ಡೆತ್ ಎನ್ನಬಹುದಾದರೂ ಪೊಲೀಸರ ಕಿರುಕುಳದಿಂದ ಆರೋಪಿ ಮೃತಪಟ್ಟಿಲ್ಲ. ನೇಣು ಹಾಕಿಕೊಂಡಿದ್ದ ಕಾರಣ ಮೃತಪಟ್ಟಿದ್ದಾನೆ. ಇಂಥ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ. ಈ ಘಟನೆ ಕುರಿತು ಸಿಐಡಿ ತನಿಖೆಗೆ ವಹಿಸುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.