ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಒಪ್ಪಿಗೆ, ಷರತ್ತು ಅನ್ವಯ | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿಯನ್ನು ನೀಡಿದೆ. ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 3 ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಒಪ್ಪಿಗೆ ಕೊಡಲಾಗಿದೆ.
ಸಾರ್ವಜನಿಕ ಗಣೇಶೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡಿದರೆ ಅಲ್ಲಿ ಹೆಚ್ಚು ಜನರು ಸೇರುತ್ತಾರೆ. ಆಗ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದ್ದರಿಂದ ತಜ್ಞರ ಜೊತೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಷರತ್ತು ಬದ್ಧ ಅನುಮತಿ ನೀಡಿದ್ದಾರೆ.
ಜೊತೆಗೇ ಮೂರನೇ ಅಲೆಯ ಭೀತಿ ಕೂಡ ಇದೆ. ಆದ್ದರಿಂದ ಕರೊನಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಪೂರ್ಣವಾಗಿ ಕೈಗೊಂಡು, ಸೀಮಿತ ಪ್ರಮಾಣದಲ್ಲಿ ಆಚರಣೆ ನಡೆಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಗಣೇಶೋತ್ಸವ ನಡೆಸಲು ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಅಶೋಕ್ ಮಾಹಿತಿ ನೀಡಿದರು.
- ಮೂರು ದಿನ ಮಾತ್ರ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಕೊಡಲಾಗಿದೆ. ಆದರೆ ಮೆರವಣಿಗೆ ನಡೆಸಲು ಅನುಮತಿ ಇಲ್ಲ. ಸಂಗೀತ, ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ.
- ಗಣೇಶೋತ್ಸವಕ್ಕೆ 50 ಬೈ 50 ಅಡಿ ಪಂಡಾಲ್ ಹಾಕಬಹುದು. 4 ಅಡಿಗಿಂತ ಹೆಚ್ಚು ದೊಡ್ಡ ಮೂರ್ತಿ ಇಡುವ ಹಾಗಿಲ್ಲ. ಗರಿಷ್ಠ 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿರುತ್ತದೆ. ಗಣೇಶೋತ್ಸವಕ್ಕೆ 50 ಕ್ಕಿಂತ ಹೆಚ್ಚು ಜನರು ಸೇರುವ ಹಾಗಿಲ್ಲ.
- ಪ್ರತಿಷ್ಠಾಪನೆ ಮಾಡಿದ ಗಣೇಶಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಲು ಅವಕಾಶವಿಲ್ಲ. ಬಿಬಿಎಂಪಿ, ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳದಲ್ಲಿಯೇ ವಿಸರ್ಜನೆ ಮಾಡಬೇಕು.
- ಸಾರ್ವಜನಿಕ ಗಣೇಶೋತ್ಸವ ಅತ್ಯಂತ ಸರಳವಾಗಿ ನಡೆಯಬೇಕು. ಒಂದು ಏರಿಯಾದಲ್ಲಿ ಇಂತಿಷ್ಟು ಗಣೇಶವಿಗ್ರಹಗಳನ್ನು ಮಾತ್ರ ಕೂರಿಸಬೇಕು ಎಂದು ಷರತ್ತು ಹಾಕಲಾಗಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಬಿಬಿಎಂಪಿ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
- ಬಹಳ ಮುಖ್ಯವಾಗಿ, ಯಾವುದೇ ಶಾಲೆ ಅಥವಾ ಕಾಲೇಜುಗಳಲ್ಲಿ ಗಣೇಶ ಮೂರ್ತಿಯನ್ನು ಇಡುವ ಹಾಗಿಲ್ಲ. ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ಮುನ್ನ ಆಯಾ ಸಂಬಂಧಿತ ಗ್ರಾಮ ಪಂಚಾಯಿತಿ ಅಥವಾ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಸರ್ಕಾರ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
- ಸಾರ್ವಜನಿಕ ಗಣೇಶೋತ್ಸವಗಳು ನಡೆಯುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕರೊನಾ ಲಸಿಕಾ ಅಭಿಯಾನ ನಡೆಸಬೇಕು. ಜಿಲ್ಲಾಡಳಿತ ಈ ಲಸಿಕಾ ಕಾರ್ಯಕ್ರಮ ಆಯೋಜಿಸಲು ಕ್ರಮ ತೆಗೆದುಕೊಳ್ಳಬೇಕು. ಹಾಗೂ ಗಣೇಶ ಪ್ರತಿಷ್ಠಾಪನೆಗೆ ಮುಂದಾಗುವ ಜನರು ಅಥವಾ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರು ಕಡ್ಡಾಯವಾಗಿ ಕರೊನಾ ಲಸಿಕೆ ಪಡೆದಿರಬೇಕು. ಇಲ್ಲವೇ ಸ್ಥಳದಲ್ಲೇ ಪಡೆಯಬೇಕು.