ದ.ಕ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂ ರದ್ದು: ರಾಜ್ಯ ಸರಕಾರ ಆದೇಶ | ಜನತಾ ನ್ಯೂಸ್
ಬೆಂಗಳೂರು : ದ.ಕ ಕನ್ನಡ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕೋವಿಡ್ ಪಾಸಿಟಿವಿಸಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ರಾಜ್ಯದ ಗಡಿ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಗುರುವಾರ ಆದೇಶ ಹೊರಡಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ಶೇ.2 ಕ್ಕಿಂತ ಕಡಿಮೆ ಪಾಸಿಟಿವಿಟ್ ದರ ಇರುವ ಕಾರಣ ವೀಕೆಂಡ್ ಕರ್ಫ್ಯೂ ಹಿಂತೆಗೆದುಕೊಳ್ಳುವ ಕುರಿತು ಸರ್ಕಾರ ಆದೇಶ ನೀಡಿದೆ.
ರಾಜ್ಯದಲ್ಲಿ ಸರಾಸರಿ ಕೋವಿಡ್ ಸೋಂಕಿನ ದೃಢ ಪ್ರಮಾಣ 0.73ರಷ್ಟಿದೆ. ಈ ಹಿಂದೆ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಕೋವಿಡ್ ಪಾಜಿಟಿವಿಸಿ ದರ ಶೇ.2ಕ್ಕಿಂತ ಹೆಚ್ಚಿದ್ದ ಹಿನ್ನೆಲೆಯಲ್ಲಿ ವಾರಂತ್ಯದ ಕರ್ಫ್ಯೂ ಸಹಿತ ಸೋಕು ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇದೀಗ ಕೋವಿಡ್ ದೃಢ ಪ್ರಮಾಣ ಕಡಿಮೆಯಾಗಿದೆ. ಆದುದರಿಂದ ಇದುವರೆಗೂ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂ ವನ್ನು ತೆರವುಗೊಳಿಸಲು ಆದೇಶಿಸಲಾಗಿದೆ.
ಒಂದು ವೇಳೆ ಮತ್ತೆ ಗಡಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾದರೆ, ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ಅಧಿಕಾರವನ್ನು ನೀಡಿದೆ. ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳು ವೀಕೆಂಡ್ ಕರ್ಫ್ಯೂನಂಥ ನಿಯಮವನ್ನು ಜಾರಿಗೊಳಿಸಬಹುದೆಂದು ಸರ್ಕಾರ ಆದೇಶದಲ್ಲಿ ಹೇಳಿದೆ.