ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪಲ್ಲ, ಹಿಂದಿ ದಿವಸ ಆಚರಣೆಯನ್ನೂ ಸಹಿಸಲ್ಲ: ಕೇಂದ್ರ ಸರ್ಕಾರಕ್ಕೆ ಹೆಚ್ಡಿಕೆ ಎಚ್ಚರಿಕೆ | ಜನತಾ ನ್ಯೂಸ್
ಬೆಂಗಳೂರು : ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ಹೊರಹಾಕಿರುವ ಹೆಚ್.ಡಿ.ಕೆ , ಭಾರತ ಒಕ್ಕೂಟ ರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ ? ಎಂದು ಪ್ರಶ್ನಿಸಿದ್ದಾರೆ.
ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ "ಇಂದ್ರ ವೈಭೋಗ" ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು ಎಂದು ಗುಡುಗಿದ್ದಾರೆ.
ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ, ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆಯಾಗಿದೆ. ಕನ್ನಡ 6.4 ಕೋಟಿ ಜನರ ಹೃದಯಮಿಡಿತವಾಗಿದೆ. ನಮ್ಮ ಪಾಲಿನ ಮಾತೃಸ್ವರೂಪಿಣಿ, ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು, ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ ಎಂದು ಒತ್ತಾಯಿಸಿದ್ದಾರೆ.