ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು, ರಾಷ್ಟ್ರ ರಾಜಕಾರಣ ಹೋಗಲು ಪುಕ್ಕಲುತನ ಇದೆ | ಜನತಾ ನ್ಯೂಸ್
ಮೈಸೂರು : ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟ್ರರಾಜಕಾರಣಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆಂಬ ವಿಷಯ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಕಟುವಾಗಿ ಟೀಕಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ. ಸಿದ್ದರಾಮಯ್ಯನಿಗೆ ರಾಜಕೀಯ ಪುಕ್ಕಲುತನ ಇದೆ ಎಂದು ವ್ಯಂಗ್ಯವಾಡಿದರು.
ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, ಯಡಿಯೂರಪ್ಪ ಅವರ ಪರವಾಗಿ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಹುಸಿ ಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ದೇವೇಗೌಡ ಈ ದೇಶದ ಪ್ರಧಾನಿಯಾದರು. ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಒಪ್ಪಿಕೊಳ್ಳುವ ಧೈರ್ಯ ತೋರಿದರು. ದೇವೇಗೌಡರಿಗೆ ಹೋಲಿಸಿದರೆ ಸಿದ್ದರಾಮಯ್ಯಗೆ ಧೈರ್ಯ ಇಲ್ಲ. 3ನೇ ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಕಳೆದ ಏಳು ವರ್ಷದಿಂದ ಪ್ರಧಾನಿಯಾಗಿದ್ದಾರೆ.
ಪ್ರಧಾನಿ ಹುದ್ದೆ ದೇಶದ ಪರಮೋಚ್ಚ ಸ್ಥಾನವಾಗಿದೆ. ನನಗೂ ಪ್ರಧಾನಿ ಹುದ್ದೆ ಕೊಟ್ಟರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆ ಅಂತ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ಅಲ್ಲಿಗೆ ಹೋಗದೆ ಇಲ್ಲಿಯೇ ಸಿದ್ದರಾಮಯ್ಯ ಏಕೆ ಮೋದಿ ವಿರುದ್ಧ ಗುಡುಗಬೇಕು ಎಂದು ಎಚ್ ವಿಶ್ವನಾಥ್ ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಓಲೈಕೆಯಿಂದ ಲಿಂಗಾಯತ ಸಮುದಾಯದ ಮತ ಬರಲ್ಲ. ಯಡಿಯೂರಪ್ಪ ಅವರೇ ಸ್ವಾಗತ ಮಾಡಿರುವಾಗ ನಿಮ್ಮದೇನು ಕೊಸರು? ಇಂತಹ ಬೂಟಾಟಿಕೆ ಮಾತನಾಡುವುದು ಶೋಭಾಯಮಾನ ಅಲ್ಲ. ಸಿಬಿಐ, ಸಿಐಡಿ, ಐಟಿ, ಇಡಿ ಮುಂತಾದವು ಸಾಂವಿಧಾನಿಕ ಸಂಸ್ಥೆಗಳು. ಭ್ರಷ್ಟಾಚಾರದ ಮೇಲೆ ದಾಳಿ ಮಾಡುವಾಗ ನಿಮ್ಮದೇನು ತಕರಾರು? ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ ಎಂದು ಪ್ರಶ್ನಿಸಿದರು.