ನಾಲ್ವರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ! | ಜನತಾ ನ್ಯೂಸ್
ಬೆಳಗಾವಿ : ಬ್ಲ್ಯಾಕ್ ಫಂಗಸ್ನಿಂದ ಪತ್ನಿ ಮೃತಪಟ್ಟ ನೋವಿನಲ್ಲೇ ಇದ್ದ ಪತಿ, ನಾಲ್ವರು ಮಕ್ಕಳಿಗೂ ವಿಷ ಉಣಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.
ಸೌಮ್ಯಾಹಾದಿಮನಿ(19), ಶ್ವೇತಾಹಾದಿಮನಿ(16), ಸಾಕ್ಷಿಹಾದಿಮನಿ(11), ಸೃಜನಹಾದಿಮನಿಗೆ(8) ವಿಷವುಣಿಸಿ ತಂದೆ ಗೋಪಾಲಹಾದಿಮನಿ(46) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿನ ಗೋಪಾಲ್ ಹಾದಿಮನಿ ಪತ್ನಿ ಜಯಾ, ಜುಲೈ 6ರಂದು ಬ್ಲಾಕ್ ಫಂಗಸ್ ನಿಂದಾಗಿ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕವಾಗಿ ಅವರ ಪತಿ ಗೋಪಾಲ ಹಾದಿಮನಿ ನೊಂದಿದ್ದರು. ಇದೇ ಕೊರಗಿನಲ್ಲಿ ಕಿನ್ನತೆಗೂ ಒಳಗಾಗಿದ್ದರು ಎನ್ನಲಾಗಿದೆ.
ಮೃತ ದುರ್ದೈವಿ ಗೋಪಾಲ್ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇಬ್ಬರು ಮಕ್ಕಳು ಸಂಕೇಶ್ವರ ಪಟ್ಟಣದಲ್ಲಿರುವ ಕಾಲೇಜಿಗೆ ಹೋಗುತ್ತಿದ್ದರು. ಇನ್ನುಳಿದ ಇಬ್ಬರು ಮಕ್ಕಳು ಗ್ರಾಮದಲ್ಲೇ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.