ಸಂಧಾನ ಯಶಸ್ವಿ? : ರಾಹುಲ್ ಗಾಂಧಿ ಭೇಟಿ ಮಾಡಿದ ರಾಜ್ಯ ಕಾಂಗ್ರೆಸ್ ಮುಖಂಡರು | ಜನತಾ ನ್ಯೂಸ್

ನವದೆಹಲಿ : ಕರ್ನಾಟಕ ರಾಜ್ಯ ಕಾಂಗ್ರೆಸ್ ಮುಖಂಡರು ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಹಾಗೂ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ರಾಜ್ಯ ಕಾಂಗ್ರೆಸ್ ನ ಪ್ರಭಾವಿ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಬಣಗಳ ನಡುವೆ ಶೀತಲ ಸಮರ ನಡೆಯುತ್ತಿರುವ ಬಗ್ಗೆ ಹೆಚ್ಚುತ್ತಿರುವ ಉಹಾಪೋಹಗಳ ನಡುವೆ ಹೈಕಮಾಂಡ ಜೊತೆ ಸಭೆ ಸಾಕಷ್ಟು ವಿಶೇಷವಾಗಿದೆ.
"ಜೊತೆಯಾಗಿದ್ದರೆ ಎಲ್ಲವೂ ಸಾಧ್ಯ..." ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಅಲ್ಲದೇ, ಮುಂಬರುವ ಚುನಾವಣೆಯ ತಯಾರಿ ಹಾಗೂ ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಕುರಿತು ಶ್ರೀ ರಾಹುಲ್ ಗಾಂಧಿ ಅವರೊಂದಿಗೆ ಇಂದು ದಿಲ್ಲಿಯಲ್ಲಿ ನಡೆದ "ಪವರ್ ಪ್ಯಾಕ್" ಸಭೆಯ ನೋಟವಿದು. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ರಣದೀಪ್ ಸುರ್ಜೆವಾಲಾ, ರಾಜ್ಯಸಭೆಯ ವಿಪಕ್ಷ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಮೊದಲಾದವರು ಉಪಸ್ಥಿತರಿದ್ದರು, ಎಂದು ಬರೆದಿದ್ದಾರೆ.
ಇನ್ನೂ ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, ರಾಹುಲ್ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ರಾಜ್ಯಸಭೆಯ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸೇರಿದಂತೆ ಇತರೆ ಹಲವು ನಾಯಕರು ಭಾಗವಹಿಸಿದ್ದರು, ಎಂದು ಬರೆದಿದ್ದಾರೆ.