ಪಿಯು ಉಪನ್ಯಾಸಕರಿಗೆ ನೀಡುವ ಗೌರವಧನವನ್ನು 32 ಸಾವಿರಕ್ಕೆ ಏರಿಕೆ! | ಜನತಾ ನ್ಯೂಸ್

ಬೆಂಗಳೂರು : ಸಿಎಂ ಆಗಿ ಚೊಚ್ಚಲ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಿಯು ಉಪನ್ಯಾಸಕರಿಗೆ ಬಂಪರ್ ಕೊಡುಗೆಯನ್ನು ನೀಡಿದ್ದಾರೆ.
ಪಿಯು ಉಪನ್ಯಾಸಕರಿಗೆ ನೀಡುವ ಗೌರವಧನವನ್ನು 32 ಸಾವಿರಕ್ಕೆ ಏರಿಕೆ ಮಾಡುವ ಮೂಲಕ ಸಿಎಂ ಬೊಮ್ಮಾಯಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಶಿಕ್ಷಕರ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಆಗುವವರೆಗೆ ಸುಮಾರು 27,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲಾಗುತ್ತದೆ ಎಂದು ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ 500 ಕೋಟಿ ರೂ ಅನುದಾನ ಮೀಸಲಿಡಲಾಗಿದ್ದು, ಇದು ರಾಜ್ಯದಲ್ಲಿ ಮೊದಲ ಬಾರಿಗೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದ ಏಳು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ತಂತ್ರಜ್ಞಾನ ಸಂಸ್ಥೆಗಳನ್ನಾಗಿ ಉನ್ನತೀಕರಣ ಮಾಡಲು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಚಾಮರಾಜನಗರ, ಬೀದರ್ , ಹಾವೇರಿ , ಹಾಸನ, ಕೊಡಗು , ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ವಿನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಹೇಳಿದರು.