ಸ್ನೇಹಿತನನ್ನ ಹತ್ಯೆ ಮಾಡಿ ಶವವನ್ನು ಭತ್ತದ ಬಣವೆಯಲ್ಲಿಟ್ಟು ಸುಟ್ಟಿ ಹಾಕಿದ್ದ ಆರೋಪಿ ಬಂಧನ! | ಜನತಾ ನ್ಯೂಸ್
ಬೆಳಗಾವಿ : ಪತ್ನಿ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿ ಶವವನ್ನು ಭತ್ತದ ಬಣವೆಯಲ್ಲಿಟ್ಟು ಸುಟ್ಟಿ ಹಾಕಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿಯಾಗಿದ್ದ ಪರಶುರಾಮ ಕುರುಬರ ಬಂಧಿತ ಆರೋಪಿ. ಕೊಲ್ಹಾಪುರ ಜಿಲ್ಲೆಯ ಚಂದಗಡದ ಸಂತೋಷ ನಾರಾಯಣ ಪರೀಟ್ (36) ಕೊಲೆಯಾದ ವ್ಯಕ್ತಿ.
ಸಂತೋಷನ ಪತ್ನಿಯೊಂದಿಗೆ ಸ್ನೇಹಿತ ಪರಶುರಾಮ ಕುರುಬರ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೇ ಪರಶುರಾಮ, ಸ್ನೇಹಿತನ ಪತ್ನಿ ರೂಪಾಳನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ.
ಸಂತೋಷ್ ಮಾ.1ರಂದು ಪತಿಯು ರೂಪಾಳನ್ನು ಭೇಟಿ ಮಾಡುವ ಉದ್ದೇಶದಿಂದ ಕಣಬರಗಿ ಬಂದಿದ್ದಾನೆ. ಈ ವೇಳೆ ಆರೋಪಿ ಪರಶುರಾಮ ಕುರುಬರ ಕಣರ್ಗಿ ಬಸ್ ತಂಗುದಾಣದಲ್ಲಿ ಸಂತೋಷ್ನನ್ನು ನೋಡಿ ತಕ್ಷಣ ಆತನನ್ನು ದ್ವಿಚಕ್ರ ವಾಹನ ಮೇಲೆ ಕೂರಿಸಿಕೊಂಡಿದ್ದಾನೆ.
ನಂತರ ಸುರಭಿ ಕ್ರಾಸ್ ಬಳಿ ಇರುವ ನ್ಯೂ ರೇಣುಕಾ ನಗರ ಹತ್ತಿರವಿದ್ದ ವಂಟಮೂರಿ ಕಾಲೋನಿಯ ಯಲ್ಲಪ್ಪ ಬುಡುಗ ಎಂಬವರ ಕೃಷಿ ಜಮೀನಿಗೆ ಕರೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿದ್ದಾನೆ.
ನಶೆಯಲ್ಲಿ ಆರೋಪಿ ಪರಶುರಾಮ ತನ್ನ ಬಳಿಯಿದ್ದ ಟವೆಲ್ನಿಂದ ಸಂತೋಷನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ಬಳಿಕ ಅಲ್ಲೇ ಇದ್ದ ಭತ್ತದ ಬಣವೆಯಲ್ಲಿ ಶವವನ್ನ ಇಟ್ಟು ಬೆಂಕಿ ಹಚ್ಚಿ ಪರಾರಿಯಾಗಿದ್ದ ಎನ್ನಲಾಗಿದೆ.
ಜಮೀನಿನ ಮಾಲೀಕ ಯಲ್ಲಪ್ಪಾ ಅರೆಬೆಂದ ದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನೆ ನಡೆದ ನಾಲ್ಕೇ ದಿನಗಳಲ್ಲಿ ಆರೋಪಿಯನ್ನು ಬೈಕ್ ಸಮೇತವಾಗಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.