ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಯಸಿಗೆ ಬೆಂಕಿ ಇಟ್ಟು ಹತ್ಯೆ? | JANATA NEWS

ಬೆಂಗಳೂರು : ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಯಸಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಆರೋಪ ಪ್ರಿಯಕರನ ವಿರುದ್ಧ ಕೇಳಿಬಂದಿದೆ.
ಮದುವೆಯಾಗುವಂತೆ ಕೇಳಿದ್ದ ಪ್ರೇಯಸಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.
ವಿಜಯಪುರ ಮೂಲದ ದಾನೇಶ್ವರಿ ಕೊಲೆಯಾದ ಮಹಿಳೆ. ಮೃತ ದಾನೇಶ್ವರಿ, ಶಿವಕುಮಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ವಿಜಯಪುರದ ಬಿಎಲ್ಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ವಿದ್ಯಾಭ್ಯಾಸದ ಬಳಿಕ ಶಿವಕುಮಾರ್, ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದ ಸ್ಟೇನ್ ಲೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಶಿವಕುಮಾರ್ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ದಾನೇಶ್ವರಿ ಬಂದು, ಮದುವೆ ಆಗುವಂತೆ ಹೇಳಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಪೆಟ್ರೋಲ್ ತಂದಿದ್ದ ಶಿವಕುಮಾರ್ ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ನಂತರ ದಾನೇಶ್ವರಿಯನ್ನು ಕೂಡ್ಲುಗೇಟ್ ಬಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.