ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಏನನ್ನೂ ಸೇರಿಸೋ ಅವಶ್ಯಕತೆ ಇಲ್ಲ! | JANATA NEWS

ಬೆಂಗಳೂರು : ಎಲ್ಲ ತಿಳಿದವರೇ ಸೇರಿ ಪಠ್ಯ ಕ್ರಮ ರಚನೆ ಮಾಡಿದ್ದು, ಹೊಸದಾಗಿ ಏನನ್ನೂ ಸೇರಿಸೋ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಆರಂಭದಿಂದಲೇ ನಾನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಗೆ ವಿರೋಧ ಮಾಡಿರುವವನು. ಎಲ್ಲಾ ತಿಳಿದವರೇ ಸೇರಿಕೊಂಡು ಪಠ್ಯ ಕ್ರಮ ರಚನೆ ಮಾಡಿದ್ದಾರೆ. ಇದೀಗ ಹೊಸತಾಗಿ ಪಠ್ಯಕ್ಕೆ ಏನನ್ನೂ ಸೇರಿಸುವ ಅವಶ್ಯಕತೆ ಇಲ್ಲ ಎಂದರು.
ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದಾಗಲೇ ಎರಡು ರೂಪಾಯಿಗೆ ಭಗವದ್ಗೀತೆ ಪುಸ್ತಕ ಕೊಟ್ಟಿದ್ದರು. ಈಗ ಇವರು ಹೊಸದಾಗಿ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇವರು ಹೊಸದಾಗಿ, ದೊಡ್ಡದಾಗಿ ಏನು ಮಾಡಬೇಕಾಗಿಲ್ಲ ಎಂದು ತಿಳಿಸಿದರು.
ನಾನು ಎನ್ಇಪಿಯನ್ನು ಸಂಪೂರ್ಣವಾಗಿ ವಿರೋಧ ಮಾಡಿದ್ದೇನೆ. ದೇಶದಲ್ಲಿ ಅದರ ಅವಶ್ಯಕತೆ ಇಲ್ಲ. ಎಲ್ಲರೂ ಬುದ್ದಿವಂತರಾಗಿದ್ದಾರೆ. ಎಲ್ಲಾ ಧರ್ಮಗಳ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದು ತಪ್ಪೇನಲ್ಲ. ಯಾವ ಸಿಲೆಬಸ್ ಸೇರಿಸುತ್ತಾರೋ ನೋಡೋಣ. ಈಗಾಗಲೇ ಎಲ್ಲಾ ಧರ್ಮಗಳ ಬಗ್ಗೆ ಪಠ್ಯದಲ್ಲಿ ಉಲ್ಲೇಖಗಳಿವೆ. ಹೊಸದಾಗಿ ವೈಭವೀಕರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.