ರಾಮನ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಬೇಡಿ, ರಾವಣನ ಹೆಸರನ್ನ ಇಟ್ಟುಕೊಳ್ಳಿ: ಎಚ್ಡಿ ಕುಮಾರಸ್ವಾಮಿ ಕಿಡಿ | JANATA NEWS

ಬೆಂಗಳೂರು : ಶ್ರೀರಾಮನ ಹೆಸರು ಇಟ್ಟುಕೊಂಡು ಶಾಂತಿ ಹಾಳು ಮಾಡುವ ಕೆಲಸ ಮಾಡದಿರಿ, ಅಂಥ ಕೃತ್ಯಗಳನ್ನು ಎಸಗಲು ರಾವಣನ ಹೆಸರಿಟ್ಟುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ಎಚ್ಡಿಕೆ ಅವರ ತೋಟಕ್ಕೆ ಭೇಟಿ ನೀಡಿದ ಶ್ರೀಗಳು, ತಮ್ಮ ಸಮುದಾಯಗಳ ಸ್ಥಿತಿಗತಿ, ಸಮಸ್ಯೆ, ಸವಾಲುಗಳು ಸೇರಿದಂತೆ ರಾಜ್ಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬಾಬು ಜಗಜೀವನ್ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾತನಾಡಿ, ಕೆಲವರು ಶ್ರೀರಾಮ ಸೇನೆ, ಮತ್ಯಾವುದೋ ಸೇನೆ ಅಂತ ಹೆಸರು ಇಟ್ಟಕೊಂಡಿದ್ದಾರೆ. ರಾಮನ ಹೆಸರಿಟ್ಟುಕೊಂಡು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಅಂಥವರು ರಾವಣ ಸೇನೆ ಎಂದು ಹೆಸರಿಟ್ಟುಕೊಂಡರೆ ಉತ್ತಮ. ಇವರು ರಾಮನ ಹೆಸರಿಗೆ ಯಾಕೆ ಕಳಂಕ ತರುತ್ತಿದ್ದಾರೆ. ದಯಮಾಡಿ ಮರ್ಯಾದಾ ಪುರುಷೋತ್ತಮನ ಹೆಸರಿಗೆ ಕಳಂಕ ತರಬೇಡಿ ಎಂದು ಕಿಡಿಕಾರಿದರು.
ಏನು ನಿಮ್ಮದು ಸಂಸ್ಕೃತಿನಾ? ನೀವು ದೇಶ ಕಟ್ಟೋರಾ? ಯಾವ ಸೇನೆಯೋ, ರಾಮ್ ಸೇನೆಯೋ, ಇನ್ಯಾವುದೋ ಸೇನೆಯೋ..? ರಾಮನ ಹೆಸರಲ್ಲಿ ಮನೆ ಹಾಳು ಮಾಡಲು ಮಾಡಿಕೊಂಡಿದ್ರಾ ಇವೆಲ್ಲ.. ದೇಶ ಹಾಳು ಮಾಡೋಕೆ ಮಾಡಿಕೊಂಡಿದ್ದಿರೋ? ಆ ರಾಮನ ಹೆಸರನ್ನ ಯಾಕೆ ಹಾಳು ಮಾಡ್ತಿರಿ. ರಾವಣನ ಹೆಸರನ್ನ ಇಟ್ಟುಕೊಳ್ಳಿ ನೀವು. ಆಗ ನಿಮಗೆ ನಡೆದುಕೊಳ್ಳುತ್ತಿರುವ ರೀತಿಗೆ ಸರಿ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದೇ ಪದೇ ಬಿಜೆಪಿ ಸಹ ಸಂಸ್ಥೆಗಳು ಈ ರೀತಿ ಸಾಮರಸ್ಯ ಹಾಳು ಮಾಡುತ್ತಿದೆ. ನಿಜಕ್ಕೂ ನಮ್ಮ ಸಂಸ್ಕೃತಿಗೆ ಅಗೌರವ ತೋರಿಸುತ್ತಿದ್ದಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರವೂ ಈ ವಿಚಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ದಿನಕ್ಕೆ ಒಂದು ವಿಚಾರ ಪ್ರಾರಂಭ ಮಾಡುತ್ತಿದ್ದಾರೆ. ನಿಜವಾಗಿಯೂ ಅವರು ರಾಮಭಕ್ತರೇ ಆಗಿದ್ದರೆ, ದಿನನಿತ್ಯದಲ್ಲಿ ನಮ್ಮ ಪರಂಪರಾಗತ ಸಂಪ್ರದಾಯ ಆಚರಣೆಗೆ ಒತ್ತು ಕೊಟ್ಟರೆ ಹಿಂದೂ ಧರ್ಮ ಕಾಪಾಡಿದಂತಾಗುತ್ತದೆ ಆಗುತ್ತದೆ ಎಂದು ಹೇಳಿದರು.