ಇನ್‌ಸ್ಟಾಗ್ರಾಂನಲ್ಲಿ ಬೆತ್ತಲೆ ಫೋಟೋ ಕಳುಹಿಸುವಂತೆ ಬೆದರಿಕೆ, ಬ್ಲ್ಯಾಕ್ಮೇಲ್ಗೆ ಹೆದರಿ ಯುವತಿ ಆತ್ಮಹತ್ಯೆ | JANATA NEWS

ಶಿವಮೊಗ್ಗ : ಇನ್‌ಸ್ಟಾಗ್ರಾಂ ಖಾತೆ ಮೂಲಕ ಬ್ಲಾಕ್‌ಮೇಲ್ ಮಾಡಿದ್ದರ ಪರಿಣಾಮ ಮನನೊಂದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ.
23 ವರ್ಷದ ಪದವಿ ಯುವತಿಗೆ ಇನ್‌ಸ್ಟಾಗ್ರಾಂ ಖಾತೆಗೆ dlatico_ph ಎಂಬ ಖಾತೆಯ ಮೂಲಕ ವ್ಯಕ್ತಿಯೊಬ್ಬ ಪದೇ ಪದೇ ಕರೆ ಮಾಡುತ್ತಿದ್ದ. 'ನಿನ್ನ ಬೆತ್ತಲೆ ಫೋಟೋ ಕಳುಹಿಸು' ಎಂದು ಒತ್ತಾಯಿಸುತ್ತಿದ್ದ. ಒಂದು ವೇಳೆ ಫೋಟೋ ಕಳುಹಿಸದಿದ್ದರೆ ತನ್ನ ಬಳಿ ಇರುವ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರಿಂದ ಬೆದರಿದ ಯುವತಿ ಆ ಯುವಕನಿಗೆ ಇನ್ಸ್ಟಾಗ್ರಾಂನಿಂದ ಕರೆ ಮಾಡಿ ತನ್ನ ಬೆತ್ತಲೆ ವಿಡಿಯೋವನ್ನು ತೋರಿಸಿದ್ದಳಂತೆ. ಇದನ್ನೇ ಆ ಯುವಕ ರೆಕಾರ್ಡ್ ಮಾಡಿಕೊಂಡು ಯುವತಿಗೆ ಪದೇ ಪದೇ ಬೆತ್ತಲೆ ವಿಡಿಯೋ ಕಾಲ್ಗೆ ಬಾ, ನಿನ್ನ ಬೆತ್ತಲೆ ಫೋಟೋ ಕಳುಹಿಸು ಎಂದು ಪದೇ ಪದೇ ಬೆದರಿಕೆ ಹಾಕಿದ್ದಾನೆ. ನೀನು ತೋರಿಸದೆ ಹೋದರೆ ತನ್ನ ಬಳಿ ಇರುವ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಿನ್ನ ಬೆತ್ತಲೆ ಫೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ.
ಅಪರಿಚಿತನ ಬೆದರಿಕೆ ಹೆಚ್ಚಾದ ಹಿನ್ನೆಲೆ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಧೈರ್ಯ ಹೇಳಿದ ಪೋಷಕರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಶಿರಾಳಕೊಪ್ಪ ಠಾಣೆಗೆ ಹೋಗಿ ದೂರು ನೀಡಲು ಸಿದ್ಧವಾಗಿ ಬರುವಂತೆ ತಂದೆ ಮಗಳಿಗೆ ತಿಳಿಸಿದ್ದಾರೆ. ಕೊಠಡಿಯೊಳಗೆ ಹೋದ ಯುವತಿ ಬಾಗಿಲು ಹಾಕಿಕೊಂಡು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ.