ಕಾಂಗ್ರೆಸ್ ನಿಯೋಗ ಸಚಿವ ಈಶ್ವರಪ್ಪ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಕೆ | JANATA NEWS

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಈಶ್ವರಪ್ಪ ವಜಾ ಮಾಡುವಂತೆ ಮನವಿ ಸಲ್ಲಿಸಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಿಂದೆ ಸಚಿವ ಕೆ.ಎಸ್. ಈಶ್ವರಪ್ಪ ಕೈವಾಡ ಇದೆ. ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸುವಂತೆ ಹಾಗೂ ಸೂಕ್ತ ತನಿಖೆ ನಡೆಸುವಂತೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸುವಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಈ ಪ್ರಕರಣ ಕಪ್ಪುಚುಕ್ಕೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೊದಲಿಂದಲೂ ಉತ್ತಮ ಆಡಳಿತ ನೀಡುತ್ತಾ ಬಂದಿದೆ. ಆದರೆ ಈಗ ಬಿಜೆಪಿ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರ ವಿರುದ್ಧ ಗುತ್ತಿಗೆದಾರರ ಸಂಘ ಧ್ವನಿ ಎತ್ತಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬುವವರು ಸಚಿವ ಈಶ್ವರಪ್ಪ ಭ್ರಷ್ಟಾಚಾರದ ಬಗ್ಗೆ ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರದಲ್ಲಿ: ನಾವು ತಮ್ಮಲ್ಲಿ ಗೌರವ ಪೂರ್ವಕವಾಗಿ ಮನವಿ ಮಾಡುವುದೇನೆಂದರೆ, ಬೆಳಗಾವಿ ಜಿಲ್ಲೆಯ ಸಂತೋಷ್ ಕೆ. ಪಾಟೀಲ್ ಅವರು ಓರ್ವ ಗುತ್ತಿಗೆದಾರ ಮತ್ತು ಹಿಂದೂ ವಾಹಿನಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಇವರು ಏ.12 ರಂದು ತಮ್ಮ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಹೊಣೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆತ್ಮಹತ್ಯೆ ಸಂದೇಶ ರವಾನಿಸಿ ಉಡುಪಿಯ ಖಾಸಗಿ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿನ್ನೆಲೆ ಸಚಿವರು ಆತ್ಮಹತ್ಯೆಗೆ ನೇರ ಹೊಣೆಯಾಗಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇದಲ್ಲದೆ, ಅವರು ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಇತರ ಹಿರಿಯ ನಾಯಕರಲ್ಲಿ ತಮ್ಮ ಪತ್ನಿ ಮತ್ತು ಮಗುವಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆಂದು ಹೇಳಲಾದ ವಾಟ್ಸ್ ಆ್ಯಪ್ ಸಂದೇಶದ ಪ್ರತಿಯನ್ನು ನಿಮ್ಮ ಪರಿಗಣನೆಗಾಗಿ ಇಲ್ಲಿ ಲಗತ್ತಿಸಲಾಗಿದೆ ಎಂದು ತಿಳಿಸಲಾಗಿದೆ.
- ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಮಂತ್ರಿಮಂಡಲದಿಂದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ವಜಾಗೊಳಿಸಬೇಕು,
- ಕೆ.ಎಸ್.ಈಶ್ವರಪ್ಪ ಮತ್ತು ಅವರ ಮಿತ್ರರ ಕುಮ್ಮಕ್ಕಿನಿಂದ ಸಂತೋಷ್ ಕೆ. ಪಾಟೀಲ್ ಆತ್ಮಹತ್ಯೆಗೆ ಶರಣಾದ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು
- IPC ಯ ಸೆಕ್ಷನ್-306 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್-13 ಮತ್ತು ಕಾನೂನಿನ ಇತರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಕ್ರಿಮಿನಲ್ ಮೊಕದ್ದಮೆಯನ್ನು ತಕ್ಷಣವೇ ದಾಖಲಿಸಬೇಕು
- ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ರಾಜ್ಯಪಾಲರ ಎದುರು ಕಾಂಗ್ರೆಸ್ ನಿಯೋಗದ ಮನವಿ ಮಾಡಿದೆ.