ಈಶ್ವರಪ್ಪ ತಪ್ಪು ಮಾಡದೇ ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ: ಬಿ.ಎಸ್.ಯಡಿಯೂರಪ್ಪ | JANATA NEWS

ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ಯಾವುದೇ ತಪ್ಪು ಮಾಡದಿದ್ದರೂ ಅವರು ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ಕೆ.ಎಸ್.ಈಶ್ವರಪ್ಪಅವರು ತಮ್ಮ ಸಚಿವ ಸ್ಥಾನಕ್ಕೆ ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಬಿಎಸ್ವೈ ಮಾತನಾಡಿ, ಯಾವುದೇ ತಪ್ಪು ಮಾಡದ ಈಶ್ವರಪ್ಪ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಇನ್ನು ಎರಡ್ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿದರೆ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರ ಏನೂ ಇಲ್ಲ ಎಂಬುದು ದೃಢವಾಗುತ್ತದೆ. ಆಗ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಯಾವುದೇ ಅಭ್ಯಂತರವಿರುವುದಿಲ್ಲ. ಈಗಿನ ಪರಿಸ್ಥಿತಿಯನ್ನು ಈಶ್ವರಪ್ಪ ಸಮರ್ಥವಾಗಿ ಎದುರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಕರಣದಿಂದ ಹೊರಬಂದು ಮತ್ತೆ ಸಚಿವರಾಗಲಿದ್ದಾರೆ. ತನಿಖೆ ಮುಗಿದ ಬಳಿಕ ಈಶ್ವರಪ್ಪ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.