ಭಾರತಕ್ಕೆ ಹಾನಿಯುಂಟು ಮಾಡಿದರೆ, ಭಾರತ ಯಾರನ್ನೂ ಬಿಡುವುದಿಲ್ಲ - ರಕ್ಷಣಾ ಸಚಿವ ರಾಜನಾಥ್ ಸಿಂಗ್ | JANATA NEWS

ವಾಷಿಂಗ್ಟನ್ : ಭಾರತಕ್ಕೆ ಹಾನಿಯುಂಟು ಮಾಡಿದರೆ, ಭಾರತ ಯಾರನ್ನೂ ಬಿಡುವುದಿಲ್ಲ, ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಭಾರತ ಅಮೇರಿಕ 2+2 ಮಂತ್ರಿಮಂಡಲದಲ್ಲಿ ಪಾಲ್ಗೊಳ್ಳಲು ಅಮೇರಿಕ ಪ್ರವಾಸದಲ್ಲಿರುವ ರಕ್ಷಣಾ ಸಚಿವರು ಚೀನಾಕ್ಕೆ ಬಲವಾದ ಸಂದೇಶವನ್ನು ನೀಡಿದ್ದಾರೆ.
ಅವರ ಗೌರವಾರ್ಥವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ರಕ್ಷಣಾ ಸಚಿವರು ಚೀನಾದ ಗಡಿಯಲ್ಲಿ ಭಾರತೀಯ ಸೈನಿಕರು ತೋರಿದ ಶೌರ್ಯದ ಬಗ್ಗೆ ಸಭೆಗೆ ತಿಳಿಸಿದರು.
“ಅವರು(ಭಾರತೀಯ ಸೈನಿಕರು) ಏನು ಮಾಡಿದರು ಮತ್ತು ನಾವು(ಸರ್ಕಾರ) ಯಾವ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ, ಎಂಬುದನ್ನು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತಕ್ಕೆ ಹಾನಿಯಾದರೆ ಭಾರತ ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶ (ಚೀನಾಕ್ಕೆ) ಹೋಗಿದೆ. ಎಂದು ನಾನು ಖಂಡಿತವಾಗಿ ಹೇಳಬಲ್ಲೆ. (ಭಾರತ್ ಕೋ ಅಗರ್ ಕೋಯಿ ಛೇಡೇಗಾ ತೋ ಭಾರತ್ ಛೋಡೇಗಾ ನಹಿ)", ಎಂದು ಅವರು ಹೇಳಿದರು.
ಮೇ 5, 2020 ರಂದು ಪ್ಯಾಂಗೊಂಗ್ ಸರೋವರದ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಮಿಲಿಟರಿಗಳ ನಡುವಿನ ಲಡಾಖ್ ಗಡಿ ಬಿಕ್ಕಟ್ಟು ಭುಗಿಲೆದ್ದಿತು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಮುಖಾಮುಖಿಯು ಉಲ್ಬಣಗೊಂಡಿತು. ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಅನಿರ್ದಿಷ್ಟ ಸಂಖ್ಯೆಯ ಚೀನೀ ಸೈನಿಕರು ಕೊಲ್ಲಲ್ಪಟ್ಟರು.
ಅಮೇರಿಕ ಪ್ರವಾಸದಲ್ಲಿರುವ ರಕ್ಷಣಾ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗಿದೆ, ಎಂದು ಅವರು ಪ್ರತಿಪಾದಿಸಿದರು.
ವಾಷಿಂಗ್ಟನ್ ಡಿಸಿ ಯಲ್ಲಿ ಭಾರತ ಅಮೇರಿಕ 2+2 ಮಂತ್ರಿಮಂಡಲದಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವರು ಇಲ್ಲಿಗೆ ಬಂದಿದ್ದರು. ಅದರ ನಂತರ, ಅವರು IndoPACOM ಪ್ರಧಾನ ಕಛೇರಿಯಲ್ಲಿ ಸಭೆಗಳಿಗಾಗಿ ಹವಾಯಿಗೆ ಪ್ರಯಾಣಿಸಿದರು ಮತ್ತು ನಂತರ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಿದರು.