ಸಮಾನತೆ ಮತ್ತು ಸಹಬಾಳ್ವೆಯ ಹರಿಕಾರ ಡಾ. ಬಿ.ಆರ್. ಅಂಬೇಡ್ಕರ್ - ನಾಡೋಜ ಡಾ. ಮಹೇಶ ಜೋಶಿ | JANATA NEWS

ಬೆಂಗಳೂರು : ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಮೀಸಲಾಗಬಾರದು, ಅವರು ಸಮಾನತೆ ಮತ್ತು ಸಹಬಾಳ್ವೆಯ ಹರಿಕಾರರು. ಎಲ್ಲಾ ವಿಚಾರವಂತರ ಪಂಥ ಅಂಬೇಡ್ಕರ್ ಅವರದು ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು. ಇಂದು ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಸಭಾ ಭವನದಲ್ಲಿ ಆಯೋಜಿಸಿದ್ದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷ್ಣಾಜಿ ಕೊಟ್ಟ ಗೌತಮ ಬುದ್ಧ ಪುಸ್ತಕದಿಂದ ಅಂಬೇಡ್ಕರ್ ಜೀವನ ಶೈಲಿಯೇ ಬದಲಾಗಿತ್ತು. ದೇವರು ಸೃಷ್ಟಿಸಿದ ಸೃಷ್ಟಿಯಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ ಎಂದು ಸಮಾಜಕ್ಕೆ ತಿಳಿಸಿಕೊಟ್ಟವರು ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇಂದು ನಾವೆಲ್ಲಾ ಧೈರ್ಯವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವುದಕ್ಕೂ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಎಂದು ನಾವೆಲ್ಲ ಹೆಮ್ಮೆಪಡಬೇಕೆಂದರು.
ಜನಪರ ಚಿಂತಕ ಹಾಗೂ ಸಾಹಿತಿಗಳಾದ ಶ್ರೀ ಸುಬ್ಬು ಹೊಲೆಯಾರ್ ಮಾತನಾಡಿ, ಭಾರತದ ಅಂತರAಗವರಿತು, ಭಾರತದ ಸಂವಿಧಾನವನ್ನು ರಚಿಸಿದವರು. ದೇಶದ ದಲಿತರಿಗೆ, ಮಹಿಳೆಯರಿಗೆ ಅಪಾರವಾದ ಗೌರವವನ್ನು ಕೊಟ್ಟು ಅವರ ರಕ್ಷಣೆ ಹಾಗೂ ಹಕ್ಕಿಗಾಗಿ ಹೋರಾಟಿದ ಮಹಾನ್ ಚೇತನ. ಎಲ್ಲಾ ಕ್ಷೇತ್ರಗಳ ಬಗ್ಗೆ ಪರಿಪೂರ್ಣ ಅಧ್ಯಯನ ನಡೆಸಿ ತಮ್ಮದೇ ರೀತಿಯಲ್ಲಿ ನ್ಯಾಯಬದ್ಧ ವ್ಯಾಖ್ಯಾನ ನೀಡಿದವರು. ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಸರ್ಕಾರದ ಮೇಲೆ ಒತ್ತಡವನ್ನು ತಂದವರು. ಸರ್ಕಾರ ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಬೇಕು, ಬೀಜ ಬಿತ್ತುವುದಕ್ಕೂ ಸರ್ಕಾರ ಸಹಾಯಧನ ಕೊಡಬೇಕೆಂದು ಪ್ರತಿಪಾದಿಸಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕ ಎಂದು ಹೇಳಿದರು.
ಈ ಸಮಾರಂಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗಶೆಟ್ಟಿ ಅವರು ಕಾರ್ಯಕ್ರಮದ ಸ್ವಾಗತ ಹಾಗೂ ನಿರೂಪಣೆ ಮಾಡಿದರು. ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ಪಾಂಡು ಅವರು ವಂದಿಸಿದರು.