ಇಂತಹ ನೂರು ಜನರು ಮಸಿ ಬಳಿಯುವ ಪ್ರಯತ್ನ ಮಾಡಿದ್ರು ಅದಕ್ಕೆ ನಾನು ಹೆದರುವುದಿಲ್ಲ. | JANATA NEWS

ಬೆಂಗಳೂರು : ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ತಮ್ಮ ಸಹೋದರ ಭಾಗಿಯಾಗಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಚಿವ ಸಿಎನ್ ಅಶ್ವಥ್ ನಾರಾಯಣ್ ಅವರು, ಅಶ್ವತ್ಥ ನಾರಾಯಣ್ ಮೇಲೆ ಇಂತಹ ನೂರು ಜನರು ಮಸಿ ಬಳಿಯುವ ಪ್ರಯತ್ನ ಮಾಡಿದ್ರು ಅದಕ್ಕೆ ನಾನು ಹೆದರುವುದಿಲ್ಲ ಎಂದಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ತಮ್ಮ ಕುಟುಂಬದ ಹೆಸರು ಕೇಳಿಬಂದ ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಅಶ್ವಥ್ ನಾರಾಯಣ್ ಅವರು, ಗಾಳಿಯಲ್ಲಿ ಗುಂಡು ಹಾರಿಸುವ KPCC ಅಧ್ಯಕ್ಷರ ಕೀಳುಮಟ್ಟದ ರಾಜಕಾರಣ ಇಂದು ನಿನ್ನೆಯದಲ್ಲ. ನಿರಾಧಾರ ಆರೋಪ ಮಾಡುವ ಬದಲು ಸಾಕ್ಷ್ಯವಿದ್ದರೆ ಬಿಡುಗಡೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗುತ್ತೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಆಧಾರ ಸಹಿತವಾಗಿ ಒಂದೇ ಒಂದು ಹೇಳಿಕೆಯನ್ನು ಅವ್ರು ಕೊಟ್ಟಿಲ್ಲ, ಅವನು ಯಾವ ವ್ಯಕ್ತಿ ಎಂಬುದೇ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ಜೀವನ ಪಾರದರ್ಶಕವಾಗಿದೆ ಎಂದು ಸಚಿವ ಆಶ್ವತ್ಥ ನಾರಾಯಣ ಹೇಳಿದ್ದಾರೆ.
ರಾಮನಗರ ಜಿಲ್ಲೆ ಇವರನ್ನು ಸಂಪೂರ್ಣವಾಗಿ ಯಾರು ಒಪ್ಪಿಲ್ಲ, ಅವರು ಬರೀ ಕನಕಪುರಕ್ಕೆ ಮಾತ್ರ ಸೀಮಿತ ಆಗಿದ್ದಾರೆ. ಆಧಾರ ಇಲ್ಲದೇ ಯಾರಾದರೂ ಆರೋಪ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ್ರು. ಒಬ್ಬ ಮುಖ್ಯಮಂತ್ರಿ ಆಗ್ತಿದ್ದಾರೆ ಅಂತ ಅವ್ರೇ ಅಂದುಕೊಂಡು ಆರೋಪ ಮಾಡ್ತಾರೆ ಅಂದರೆ, ನನ್ನ ಕಂಡರೆ ಅವರಿಗೆ ಎಷ್ಟು ಭಯ ಇರಬಹುದು ಎಂದು ನೀವೇ ನೋಡಿ ಎಂದಿದ್ದಾರೆ.
ನನ್ನಂತ ವ್ಯಕ್ತಿ ಮೇಲೆ ಆರೋಪ ಮಾಡ್ತಾರೆ ಅಂದರೆ ಇವರನ್ನು ಸುಮ್ಮನೆ ಬಿಡೋಕೆ ಆಗುತ್ತಾ?, ಡಿ.ಕೆ ಶಿವಕುಮಾರ್ ಬಂಡವಾಳವನ್ನು ಒಂದೊಂದಾಗಿಯೇ ಬಿಚ್ಚಿಡುತ್ತೇನೆ ಎಂದಿದ್ದಾರೆ..
ಡಿಕೆಶಿ ಒಬ್ಬ ಕಡು ಭ್ರಷ್ಟ ಅಂತಾ ಇದೇ ಉಗ್ರಪ್ಪ ಹೇಳಿದ್ದ. ಇವನಿಗೆ ನಾಚಿಕೆ ಆಗೋಲ್ವಾ?, ನಮ್ಮ ಕುಟುಂಬ ಏನು ಡಿಕೆಶಿ ಕುಟುಂಬ ತರ ಅಲ್ಲ, ಕೆಲ ರಾಜಕಾರಣಿಗಳು ಎಲ್ಲವನ್ನೂ ಬಿಟ್ಟಿರ್ತಾರೆ. ಅಶ್ವತ್ಥ ನಾರಾಯಣ್ ಮೇಲೆ ಇಂತಹ ನೂರು ಜನರು ಮಸಿ ಬಳಿಯುವ ಪ್ರಯತ್ನ ಮಾಡಿದ್ರು ಅದಕ್ಕೆ ನಾನು ಹೆದರುವುದಿಲ್ಲ ಎಂದಿದ್ದಾರೆ.