ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಸಾವು | JANATA NEWS
ಮೈಸೂರು : ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನದಿಗೆ ಬಿದ್ದು ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮದ ಕಪಿಲಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಚಾಮರಾಜನಗರ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ 38 ವರ್ಷದ ಕವಿತಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಗೃಹಿಣಿ ಕವಿತಾ ನಿನ್ನೆ ಅವರ ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆ ಸಂಗಮ ಕ್ಷೇತ್ರಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ದೇವಾಲಯ ಪ್ರವೇಶಕ್ಕೂ ಮುನ್ನ ಶ್ರೀಕ್ಷೇತ್ರ ಸಂಗಮದ ಮುಂಭಾಗದಲ್ಲಿರುವ ಕಪಿಲಾ ನದಿ ದಡದಲ್ಲಿ ಕಾಲು ತೊಳೆಯಲು ಹೋಗಿದ್ದರು. ಕಾಲು ತೊಳೆದು ನೀರು ಸೇವಿಸಿದ ಬಳಿಕ ತಮ್ಮ ಮೊಬೈಲ್ ಫೋನಿನ ಮೂಲಕ ಸೆಲ್ಫಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಕಪಿಲಾ ನದಿಗೆ ಜಾರಿ ಬಿದ್ದು ನಿಧನರಾಗಿದ್ದಾರೆ ಎನ್ನಲಾಗಿದೆ.
ಕವಿತಾರನ್ನ ಕಳೆದುಕೊಂಡ ಪತಿ ಗಿರೀಶ್ ಮತ್ತು ಅವರ ಪುತ್ರಿಯ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.