ಉದ್ಯೋಗ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಎಂಬಿಎ ಪದವೀಧರೆ | JANATA NEWS
ಉಡುಪಿ : ಉದ್ಯೋಗ ಸಿಗಲಿಲ್ಲ ಎಂದು ಮನನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಕಾಪು ತಾಲೂಕಿನಲ್ಲಿ ನಡೆದಿದೆ.
ಸಹನಾ (23 ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಒಂದೂವರೆ ವರ್ಷದ ಹಿಂದೆ ಎಂಬಿಎ ಪದವಿ ಮುಗಿಸಿದ್ದಳು. ಆಕೆಗೆ ಸೂಕ್ತ ಕೆಲಸ ಸಿಕ್ಕಿರಲಿಲ್ಲ.
ಕಾಪು ತಾಲೂಕಿನ ಕಟ್ಟಿಂಗೇರಿಯ ಅಕ್ಕನ ಮನೆಗೆ ಬಂದಿದ್ದ ಸಹನಾ ವಿಷ ಸೇವಿಸಿದ್ದಳು. ಅಸ್ವಸ್ಥಗೊಂಡಿದ್ದ ಸಹನಾಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಅರ್ಹತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಸಹನಾ ವಿಷ ಸೇವಿಸಿದ್ದಳು. ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮಾಡಿದ್ದ ಸಹನಾ, ಉದ್ಯೋಗಕ್ಕಾಗಿ ಅಲೆದಾಡಿದ್ದಳು. ಆದರೆ, ಎಲ್ಲಿಯೂ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಗದಿದ್ದರಿಂದ ಮನನೊಂದು ವಿಷ ಸೇವಿಸಿದ್ದಳು. ಮಿಷನ್ ಆಸ್ಪತ್ರೆ, ಕೆಎಂಸಿ ಹಾಗೂ ಜಿಲ್ಲಾಸ್ಪತ್ರೆಯ ಸೇರಿದಂತೆ ಮೂರು ಆಸ್ಪತ್ರೆಗಳಲ್ಲಿ 10 ದಿನ ಸಹನಾಗೆ ಚಿಕಿತ್ಸೆ ನೀಡಲಾಗಿತ್ತು.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.