ಪ್ರಿಯಕರನಿಗಾಗಿ ಮನೆಯಲ್ಲಿದ್ದ 1 ಕೆಜಿ ಚಿನ್ನ ಕದ್ದು, ಪ್ರಿಯತಮನಿಗೆ ಕೊಟ್ಟ ಪ್ರೇಯಸಿ | JANATA NEWS

ಬೆಂಗಳೂರು : ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡಿ ಪ್ರಿಯತಮನಿಗೆ ಕೊಟ್ಟಿದ್ದಾಳೆ. ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರು ಮಗಳ ವಿರುದ್ಧ ದೂರನ್ನ ನೀಡಿದ್ದಾರೆ.
ದೀಪ್ತಿ (24) ಮದನ್ (27) ಬಂಧಿತ ಜೋಡಿಯಾಗಿದ್ದಾರೆ. ಜಕ್ಕೂರು ಲೇಔಟ್ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು.
ದೀಪ್ತಿಗೆ ಡಿವೋರ್ಸ್ ಆಗಿತ್ತು. ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್ಗೆ ಸೇರಿಕೊಂಡಿದ್ದಳು. ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್ಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಇತ್ತ ಇಬ್ಬರ ಪ್ರೀತಿಯಾಟ ಶುರುವಾಗುತ್ತಿದ್ದಂತೆ ಪ್ರಿಯಕರನಿಗೆ ನೀಡಲು ಮನೆಯಲ್ಲಿದ್ದ ತಾಯಿಯ ಒಡವೆಯನ್ನು ಕದಿಯಲು ದೀಪ್ತಿ ಆರಂಭ ಮಾಡಿದ್ದು, ತಾಯಿಗೆ ಅನುಮಾನ ಬಾರದಂತೆ ಮಾಡಲು ಕದ್ದ ಚಿನ್ನಾಭರಣ ಸ್ಥಳದಲ್ಲಿ ರೋಲ್ಡ್ ಗೋಲ್ಡ್ ಚಿನ್ನ ತಂದಿಟ್ಟಿದ್ದಾಳೆ.
ಕೆಲ ದಿನಗಳ ಹಿಂದೆ ಮದುವೆ ಸಲುವಾಗಿ ಒಡವೆ ಧರಿಸಿಕೊಳ್ಳಲು ಬೀರುವಿನಲ್ಲಿ ನೋಡಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾಳೆ.
ಮಗಳ ಮೇಲೆಯೇ ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ವೇಳೆ ಮಧುರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್ ನಲ್ಲಿ ಅಡಮಾನ ಇಟ್ಟು ಬಂದ ಹಣದಲ್ಲಿ ಮೋಜು ಮಸ್ತಿ ಮಾಡಿದ್ದಾರೆ ಎನ್ನಲಾಗಿದೆ.