KSRTC ಬಸ್-ಲಾರಿ ಮುಖಾಮುಖಿ ಡಿಕ್ಕಿ, ವಿದ್ಯಾರ್ಥಿನಿ, ಚಾಲಕ ಸಾವು, 24 ಜನ ಆಸ್ಪತ್ರೆಗೆ ದಾಖಲು | JANATA NEWS

ವಿಜಯಪುರ : ಲಾರಿ ಹಾಗೂ KSRTC ಬಸ್ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಾಗಿ ಓರ್ವ ವಿದ್ಯಾರ್ಥಿನಿ ಹಾಗೂ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟು, 24 ಜನರು ಗಾಯಗೊಂಡಿರುವ ಭೀಕರ ಅಪಘಾತ ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ವಿಜಯಪುರದಿಂದ ಕನಮಡಿ ಕಡೆಗೆ ಹೊರಟಿದ್ದ ಬಸ್ ಹಾಗೂ ಜತ್ತ್ ನಿಂದ ವಿಜಯಪುರಕ್ಕೆ ಹೊರಟಿದ್ದ ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.
ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರ ನಗರದ ನಿವಾಸಿಯಾದ 18 ವರ್ಷದ ವಿದ್ಯಾರ್ಥಿನಿ ಶ್ರದ್ಧಾ ಶಿವಾನಂದ ಬಡಿಗೇರ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಲಾರಿ ಚಾಲಕ ತಮಿಳುನಾಡು ಮೂಲದ ಬಾಬುವೆಂಕಟೇಶ ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇತರೆ 24 ಜನರನ್ನು ವಿಜಯಪುರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಲಾರಿ ಚಾಲಕ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.