10 ವಿದ್ಯಾರ್ಥಿಗೆ ಕೋವಿಡ್ ಬಂದರೆ 2-3 ದಿನ ಶಾಲೆ ಬಂದ್, ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ | JANATA NEWS

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಶಾಲೆಯಲ್ಲಿ 10 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೋವಿಡ್ -19 ಪಾಸಿಟಿವ್ ಬಂದಲ್ಲಿ 2-3 ದಿನಗಳ ಕಾಲ ಶಾಲೆಗೆ ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕದ ಶಾಲೆಗಳಿಗೆ ತಿಳಿಸಿದೆ.
ವಿದ್ಯಾರ್ಥಿಗಳು ಮನೆಯಿಂದಲೇ ಶುದ್ಧ ಬಿಸಿನೀರನ್ನು ತರುವಂತೆ ಸೂಚಿಸುವುದು.
12-14 ವರ್ಷದ ಎಲ್ಲಾ ವಿದ್ಯಾರ್ಥಿಗಳು ಕೋವಿಡ್-19ರ ಲಸಿಕೆಯನ್ನು ಪಡೆದಿರುವ ಬಗ್ಗೆ ಪರಿಶೀಲಿಸುವುದು. ಪಡೆಯದೇ ಇದ್ದಲ್ಲಿ, ಆ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಕೊಡಿಸುವುದು.
ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಯ ಸ್ಥಳೀಯ ಆಸ್ಪತ್ರೆಗಳಲ್ಲಿ ಪೋಷಕರ ಉಪಸ್ಥಿತಿಯಲ್ಲಿ ತಪಾಸಣೆಗೆ ಒಳಪಡಿಸುವುದು.
ಶಾಲೆಗಳಲ್ಲಿ ಶಿಕ್ಷಕರು ಮುಖ್ಯ ಶಿಕ್ಷಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. 50 ವರ್ಷ ಮೇಲ್ಪಟ್ಟವರು ಮತ್ತು ಪೂರ್ವಭಾವಿ ಆರೋಗ್ಯ ಲಕ್ಷಣಗಳನ್ನು ಹೊಂದಿರುವವರು ಅಗತ್ಯಾನುಸಾರ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ವಹಿಸತಕ್ಕದ್ದು ಎಂದು ಸೂಚಿಸಿದೆ.