ಕರಾವಳಿ-ಮಲೆನಾಡಲ್ಲಿ ಮುಂದುವರಿದ ಧಾರಾಕಾರ ಮಳೆ | JANATA NEWS

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.11 ರವರೆಗೆ ಗುಡುಗು, ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ಕರಾವಳಿಯಲ್ಲೇ ಹೆಚ್ಚು ಮಳೆ ಆಗುವ ಕಾರಣಕ್ಕೆ ಗುರುವಾರ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಭಾರೀ ಗಾಳಿ ಬೀಸಲಿದ್ದು, ಮಂಗಳೂರಿನಿಂದ ಕಾರವಾರ ಸಮುದ್ರದವರೆಗೆ ಭಾರಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿ, ಮಲೆನಾಡಿನ ಜತೆಗೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಸಹ ಮುಂಗಾರು ಚುರುಕಾಗಿರಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಜು. 11ರವರೆಗೆ ಮತ್ತು ಬೀದರ್, ಕಲಬುರಗಿಗಳಲ್ಲೂ ಭಾರೀ ಮಳೆ ನಿರೀಕ್ಷೆ ಕಾರಣಕ್ಕೆ ಜು.9ರಂದು ಮಾತ್ರ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಮೂರು ಜಿಲ್ಲೆಗಳಲ್ಲಿ 204 ಮಿಲಿ ಮೀಟರ್ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗುರುವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.