ಕೇಂದ್ರ ಸರ್ಕಾರ ಬಡ, ಮಧ್ಯಮ ವರ್ಗದವರ ರಕ್ತ ಹೀರುತ್ತಿದೆ, ರಾಜ್ಯ ಸರ್ಕಾರಗಳು ಸಾಥ್ ನೀಡುತ್ತಿವೆ | JANATA NEWS

ಬೆಂಗಳೂರು : ಬಡವರು, ಮಧ್ಯಮವರ್ಗದವರ ರಕ್ತಹೀರುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದ್ದು, ರಾಜ್ಯ ಸರ್ಕಾರಗಳು ಸಾಥ್ ನೀಡುತ್ತಿವೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕನಿಷ್ಠ 8 ಲಕ್ಷ ಕೋಟಿ ರೂ. ಮೊತ್ತ ನಮಗೆ ಬರಬೇಕು. ಶೇ.42 ರಷ್ಟು ನಿಯಮ ಬದ್ಧ ಅನುದಾನ ಬರಬೇಕಿತ್ತು, ಆದರೆ ಬಂದಿಲ್ಲ. ಬದಲಾಗಿ ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವಾ ಏರಿಕೆ ಆಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಎಸ್ ಟಿ ವ್ಯಾಪ್ತಿಗೆ ಹೊಸದಾಗಿ ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಗೆ ಶೇಕಡ ಐದರಷ್ಟು ಬ್ಯಾಂಕ್ ಚೆಕ್ ಗೆ ಶೇ.18ರಷ್ಟು ಜಿಎಸ್ ಟಿ ವಿಧಿಸಿದ್ದಾರೆ. ಮೊಸರು, ಮಜ್ಜಿಗೆ, ಲಸ್ಸಿ, ಪನ್ನೀರ್ ಮೇಲೆ ಉಚಿತ ತೆರಿಗೆ ಶೇ.5ರಷ್ಟು ಹೆಚ್ಚಾಗಿದೆ. ಅಕ್ಕಿ, ಬಾರ್ಲಿ, ಬೆಲ್ಲ, ಜೇನುತುಪ್ಪ ಮೇಲೆ ತೆರಿಗೆ ಹೆಚ್ಚಿಸಲಾಗಿದೆ. ಬಡವರು, ರೈತರು ಮಧ್ಯಮವರ್ಗದವರು, ವಿದ್ಯಾರ್ಥಿಗಳಿಗೆ ಭಾರ ಹೊರಿಸಿದ್ದಾರೆ ಎಂದು ಆರೋಪಿಸಿದರು.
ಶ್ರೀಮಂತರಿಗೆ ತೆರಿಗೆಯನ್ನು ಶೇ 30 ರಿಂದ 22ಕ್ಕೆ ಇಳಿಸಲಾಗಿದೆ. ಇದು ಮೋದಿ ಸರ್ಕಾರದ ಅಚ್ಛೇ ದಿನ್ ಪರಿಣಾಮ. ಬಡವರು, ಮಧ್ಯಮ ವರ್ಗದವರು ಬಳಸುವ ವಸ್ತುವನ್ನೇ ಗುರುತಿಸಿ ಜಿಎಸ್ಟಿ ಹೆಚ್ಚಿಸಲಾಗಿದೆ. ಆದಾಯ ಕುಸಿತ, ನಿರುದ್ಯೋಗ ಹೆಚ್ಚಳ, ರೈತರು, ದುಡಿಯುವ ಜನರ ಆದಾಯ ಕಡಿಮೆಯಾಗಿದೆ ಎಂದರು.
ಬಡವರ, ಮಧ್ಯಮ ವರ್ಗದವರ ರಕ್ತ ಹೀರುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಗಳು ಇದಕ್ಕೆ ಸಹಕಾರ ನೀಡುತ್ತಿವೆ. ರೈತರಿಗೆ ಗೊಬ್ಬರ ಕೊಡುವ ಶಕ್ತಿ ಸರ್ಕಾರಕ್ಕೆ ಇಲ್ಲವಾಗಿದೆ. ಇದು ಮೋದಿ 8 ವರ್ಷ, ಬೊಮ್ಮಾಯಿ 1 ವರ್ಷದ ಸಾಧನೆಯಾಗಿದೆ ಎಂದರು