ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ, ಮಾತುಕತೆ! | JANATA NEWS

ಬೆಂಗಳೂರು : ಬೆಂಗಳೂರಿಗೆ ಕಳೆದ ರಾತ್ರಿ ಬಂದಿಳಿದ ಅಮಿತ್ ಶಾ ಅವರನ್ನು ರಾಜ್ಯ ಬಿಜೆಪಿ ನಾಯಕರು ಬರಮಾಡಿಕೊಂಡಿದ್ದಾರೆ. ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ಅಮಿತ್ ಶಾ ಅವರು ಉಳಿದುಕೊಂಡಿರುವ ತಾಜ್ ವೆಸ್ಟ್ ಎಂಡ್ ಹೊಟೇಲ್ ಗೆ ಭೇಟಿ ನೀಡಿ ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. ಅಮಿತ್ ಶಾ ಜತೆ ರಾಜ್ಯ ರಾಜಕಾರಣ ಕುರಿತು ಬಿಎಸ್ವೈ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ.
ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗಳ ಕುರಿತು ಮಾತುಕತೆ ನಡೆಸಿದರು. ಅಲ್ಪಾವಧಿಯ ಈ ಭೇಟಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ನಡೆದ ಬೃಹತ್ ಸಮಾವೇಶದ ಕುರಿತು ಪ್ರಸ್ತಾಪಿಸಿದರು.
ಕರಾವಳಿಯ ಸರಣಿ ಕೊಲೆ ಪ್ರಕರಣಗಳು, ಪ್ರವೀಣ್ ಕೊಲೆಗೆ ಬಿಜೆಪಿ ಕಾರ್ಯಕರ್ತರ ಆಕ್ರೋಶ ಬೆಳವಣಿಗೆಗಳ ಬಗ್ಗೆ ಸಿಎಂ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಕಾರ್ಯಕರ್ತರೇ ನಮ್ಮ ಆಸ್ತಿ. ಕಾರ್ಯಕರ್ತರನ್ನು ಕೆರಳಿಸಿದ್ರೆ ಹುಷಾರ್ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಪ್ರಯುಕ್ತ ಸಿದ್ದರಾಮೋತ್ಸವ ಏರ್ಪಡಿಸಿ ಲಕ್ಷಗಟ್ಟಲೆ ಜನರನ್ನು ಸೇರಿಸಿ ರಾಹುಲ್ ಗಾಂಧಿಯವರು ಬಂದು ಭಾಷಣ ಮಾಡಿದ್ದಾಗಿದೆ. ವೇದಿಕೆ ಮೇಲೆ ಸಿದ್ದು-ಡಿಕೆಶಿ ಆಲಿಂಗನ ಮಾಡಿ ಒಗ್ಗಟ್ಟಿನ ಮಂತ್ರ ಜಪಿಸಿ ವಿಧಾನಸಭೆ ಚುನಾವಣೆಗೆ ಮುನ್ನ ತಾವು ಒಗ್ಗಟ್ಟಿನಿಂದ ಇದ್ದೇವೆ ಎಂದು ಆಡಳಿತ ಪಕ್ಷಕ್ಕೆ, ರಾಜ್ಯದ ಜನತೆ ಮುಂದೆ ತೋರಿಸುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿದಂತಿದೆ.
ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ನಾಯಕರು ತಮ್ಮೊಳಗಿನ ಆಂತರಿಕ ಬಿಕ್ಕಟ್ಟು ಬದಿಗೊತ್ತಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ನಿರೀಕ್ಷೆಗೂ ಮೀರಿ ಜನರ ಬೆಂಬಲ ಸಮಾವೇಶದಲ್ಲಿ ಕಂಡುಬಂದಿದೆ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಳಿಕ ಈ ಕಡೆ ಗಮನ ಹರಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.