ಮಂಗಳೂರಿನಲ್ಲಿ ಎನ್‌ಐಎ ದಾಳಿ: ಮೂವರು ಪಿಎಫ್‌ಐ ಮುಖಂಡರು ವಶಕ್ಕೆ, ಒಟ್ಟು ಐವರು ವಶ | JANATA NEWS

ಮಂಗಳೂರು : ಬರೋಬ್ಬರಿ 5ರಿಂದ ಆರು ಗಂಟೆಗಳ ಕಾಲ ಸತತ ಶೋಧ ನಡೆಸಿ ಕರಾವಳಿ ಜಿಲ್ಲೆಯ ಮಂಗಳೂರಿನಲ್ಲಿ ಇಂದು ಗುರುವಾರ ಎಸ್‌ಡಿಪಿಐ, ಪಿಎಫ್‌ಐ ಕಚೇರಿಗಳಲ್ಲಿ ರಾಷ್ಟ್ರೀಯ ತನಿಖಾ ತಂಡ ತೆರಳಿದ್ದು, ಮೂವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ಮುಂದುವರೆಸಲಾಗಿದೆ.
ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವ ಎನ್‌ಐಎ ಅಧಿಕಾರಿಗಳು, ಕಂಪ್ಯೂಟರ್ ಸಿ.ಪಿ.ಯು ನ ಹಾರ್ಡ್ ಡಿಸ್ಕ್ ಪಡೆದುಕೊಂಡಿದ್ದಾರೆ.
ಸಿ.ಪಿ.ಯು ಬಾಕ್ಸ್ ಒಪನ್ ಮಾಡಿ ಹಾರ್ಡ್ ಡಿಸ್ಕ್ ಒಯ್ದಿರುವ ಎನ್‌ಐಎ ಅಧಿಕಾರಿಗಳು, ಬೀಗವನ್ನು ಬ್ಲೇಡ್ ನಿಂದ ಕಟ್ ಮಾಡಿ ಕಚೇರಿಯ ಶಟರ್ ತೆರೆದಿದ್ದಾರೆ. ಒಳಭಾಗದ ಗಾಜಿನ ಬಾಗಿಲನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಎಸ್‌ಡಿಪಿಐ ಮುಖಂಡರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ದಾಳಿ ವೇಳೆ ಪಿಎಫ್ ಐ, ಎಸ್ ಡಿಪಿಐ ಕಾರ್ಯಕರ್ತರು ಜಮಾಯಿಸಿ ದಾಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ಮತ್ತು ರಾಜ್ಯ ಪೊಲೀಸ್ ದಾಳಿಯಲ್ಲಿ ಒಟ್ಟು ಐದು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ಮೂವರು ಮತ್ತು ಪುತ್ತೂರು ಮತ್ತು ಬಂಟ್ವಾಳದಲ್ಲಿ ಇಬ್ಬರು ಪಿಎಫ್‌ಐ ಮುಖಂಡರನ್ನು ಪಡೆದುಕೊಳ್ಳಲಾಗಿದೆ.
ಕಲ್ಲಡ್ಕದ ಬೋಳಂತೂರು ನಿವಾಸಿ ಮಹಮ್ಮದ್ ಕುಂಟ್ಟಿ ಎಂಬುವವರ ಪುತ್ರ ಪಿಎಫ್‌ಐ ರಾಜ್ಯ ನಾಯಕರಾದ ತಪ್ಸೀರ್, ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಿ ಅಬ್ದುಲ್ ಖಾದರ್ ಸಾಮೆತ್ತಡ್ಕ ಮನೆ ಮೇಲೆ ದಾಳಿ ಮಾಡಿ ದಾಖಲೆಗಳೊಂದಿಗೆ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಜೊಕ್ಕಟ್ಟೆ ನಿವಾಸಿ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಕಾವೂರು ನಿವಾಸಿ ಪಿಎಫ್‌ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನಾವಾಝ್ ಕಾವೂರು, ಹಳೆಯಂಗಡಿ ನಿವಾಸಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮೊದ್ದೀನ್ ಎಂಬುವವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದ ಪೊಲೀಸ್ ತಂಡಗಳು ದಾಳಿ ವೇಳೆ ಎನ್ ಐಎ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ. ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಬೆಳಗ್ಗೆ 6 ಗಂಟೆ ವೇಳೆಗೆ ಎನ್‌ಐಎ ದಾಳಿ ನಡೆದಿದೆ.
ಎನ್‌ಐಎ ತಂಡ ಅನಾಗರಿಕರಂತೆ ವರ್ತಿಸಿದೆ, ಎನ್‌ಐಎ ಇನ್ಸ್‌ಪೆಕ್ಟರ್ ಷಣ್ಮುಗಂ ಮತ್ತವರ ತಂಡ ಗುರುವಾರ ನಸುಕಿನ 3.30ರ ಎಸ್‌ಡಿಪಿಐ ಜಿಲ್ಲಾ ಕಚೇರಿಗೆ ದಾಳಿ ನಡೆಸಿದೆ. ಈ ವೇಳೆ ಕಚೇರಿಯ ಮುಂಭಾಗದ ಬಾಗಿಲಿನ ಗಾಜು ಒಡೆದಿದೆ. ಅಲ್ಲದೆ ಕಚೇರಿಯೊಳಗಿನ ಎಲ್ಲಾ ದಾಖಲೆಗಳನ್ನು ಚಲ್ಲಾಪಿಲ್ಲಿಯಾಗಿಸಿ ಪರಿಶೀಲನೆ ನಡೆಸಿ ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಎಂದು ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಅಥಾವುಲ್ಲಾ ಜೋಕಟ್ಟೆ ಆರೋಪಿಸಿದ್ದಾರೆ.