7 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ, ನಾಲ್ವರು ಮಹಿಳೆಯರು ಸಿಸಿಬಿ ಬಲೆಗೆ | JANATA NEWS
ಬೆಂಗಳೂರು : ಸಿಸಿಬಿ ಪೊಲೀಸರು ಓರ್ವ ವಿದೇಶಿ ಪ್ರಜೆ ಸೇರಿ, ನಾಲ್ವರು ಮಹಿಳಾ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಪುಷ್ಪಾ, ವಿಜಯಾ, ಪೊರನಮ್ಮ ಹಾಗೂ ದೇವಿ ಬಂಧಿತರು. ಇತ್ತೀಚೆಗೆ ವಿವೇಕ ನಗರ ಠಾಣಾ ಪೊಲೀಸರು ಮಾದಕ ವಸ್ತು ಸರಬರಾಜಿನಲ್ಲಿ ಸಕ್ರಿಯನಾಗಿದ್ದ ಡಿಜೆಯೊಬ್ಬನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.
ಆರೋಪಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದವರ ಮೂಲ ಹುಡುಕಿ ಹೊರಟ ಸಿಸಿಬಿ ಪೊಲೀಸರು ಪೊಲೀಸರಿಗೆ 7 ಕೋಟಿ 80 ಲಕ್ಷ ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶದ ಸಿಂತಪಲ್ಲಿಯ ಅರಣ್ಯ ಪ್ರದೇಶಗಳಿಂದ ವಿವಿಧ ಮಾದಕ ಪದಾರ್ಥಗಳಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು. ಬಳಿಕ ರೈಲಿನಲ್ಲಿ ಅವುಗಳನ್ನು ಸಾಗಿಸಿ ಬೆಂಗಳೂರು ಮೂಲದ ವ್ಯಕ್ತಿಗಳಿಗೆ ನೀಡಿ ವಾಪಸ್ ತೆರಳುತ್ತಿದ್ದರು.
ಇವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 8 ಕೆ.ಜಿ ಆಶಿಷ್ ಆಯಿಲ್, 10 ಕೆ.ಜಿ ಗಾಂಜಾ, 1 ಕೆ.ಜಿ MDMA ಕ್ರಿಸ್ಟಲ್ ವಶಕ್ಕೆ ಪಡೆದಿದ್ದಾರೆ.