ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ 2 ಕೋಟಿ ನೆರವು, ವೀರಜ್ಯೋತಿ ಯಾತ್ರೆಗೆ ನಾಳೆ ಸಿಎಂ ಬೊಮ್ಮಾಯಿ ಚಾಲನೆ | JANATA NEWS

ಬೆಂಗಳೂರು : ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಈ ಬಾರಿ ರಾಜ್ಯ ಮಟ್ಟದ ಉತ್ಸವದ ಮಾನ್ಯತೆ ಸಿಕ್ಕಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಬೆಳಗಾವಿ ಜಿಲ್ಲೆಗಷ್ಟೇ ಸೀಮಿತವಾಗಿದ್ದ ವೀರ ಜ್ಯೋತಿ ಯಾತ್ರೆ ಕೂಡ ರಾಜ್ಯ ಮಟ್ಟಕ್ಕೆ ವಿಸ್ತರಣೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2ರಂದು ಬೆಂಗಳೂರಿನ ಪುರಭವನದಲ್ಲಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಂತರ ಅದು ರಾಜ್ಯಾದ್ಯಂತ ಸಂಚರಿಸಿ ಉತ್ಸವದ ಆರಂಭದ ದಿನ ಕಿತ್ತೂರು ತಲುಪಲಿದೆ. ಕಿತ್ತೂರು ಉತ್ಸವಕ್ಕೆ ಈಗಾಗಲೇ 2 ಕೋಟಿ ಬಿಡುಗಡೆಯಾಗಿದೆ.
ನಾಳೆಯಿಂದ ಐತಿಹಾಸಿಕ ಕೇಂದ್ರಗಳಿಗೆ ವೀರಜ್ಯೋತಿ ಸಂಚಾರ ಮಾಡಲಿದೆ. ಹಾಗೂ ಕನ್ನಡ ಹಾಗು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಸಹಯೋಗದಲ್ಲಿ ಅಕ್ಟೋಬರ್ 23, 24, 25ರಂದು ಕಿತ್ತೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದರು.
ಈ ಬಾರಿ ಉತ್ಸವದಲ್ಲಿ ಮೂರು ವೇದಿಕೆ ನಿರ್ಮಿಸಲಾಗುವುದು. ಮಹಿಳೆಯರಿಗಾಗಿ ಒಂದು ದಿನ ಮೀಸಲಿಡಲು ನಿರ್ಧರಿಸಲಾಗಿದೆ. ವಿವಿಧ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ದೊರಕಲಿದೆ. ಆಹಾರ, ಫಲಪುಷ್ಪ ಪ್ರದರ್ಶನ ಸೇರಿದಂತೆ ನಾನಾ ಬಗೆಯ ವಸ್ತು ಪ್ರದರ್ಶನ ಆಯೋಜಿಸಲಾಗುವುದು. ಮೂರು ದಿನಗಳ ಕಾಲ ಆಕರ್ಷಕ ದೀಪಾಲಂಕಾರ ಮಾಡಲು ಟೆಂಡರ್ ನೀಡಲಾಗುವುದು ಎಂದು ತಿಳಿಸಿದರು.