ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗುತ್ತೆ: ಸಿಎಂ ಬೊಮ್ಮಾಯಿ | JANATA NEWS

ಬೆಂಗಳೂರು : ಬಿಜೆಪಿ ಜನಸಂಕಲ್ಪ ಯಾತ್ರೆ ಅಂಗವಾಗಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೇಸೂಗೂರಿನಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೊಮ್ಮಾಯಿ ಆರ್ಎಸ್ಎಸ್ ಕೈಗೊಂಬೆ ಅಂತಾ ವಿಪಕ್ಷನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ವಿಚಾರಕ್ಕೆ ಮಾತನಾಡಿದ ಅವರು ಆರ್ಎಸ್ಎಸ್ ಇಡೀ ಭಾರತವನ್ನು ಒಗ್ಗೂಡಿಸುತ್ತಿದೆ. ಅದು ದೇಶಪ್ರೇಮಿ ಸಂಘಟನೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸಂಘಟನೆ. ಜನ ಸಮುದಾಯಕ್ಕೆ ಧ್ವನಿ ಕೊಟ್ಟ ಶ್ರೇಷ್ಠ ಸಂಸ್ಥೆ. ಅದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ಬೊಮ್ಮಾಯಿ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಯಾವತ್ತು ಕಾಂಗ್ರೆಸ್ ಸೇರಿದರೋ ಅವತ್ತೇ ಸಮಾಜವಾದವನ್ನ ಮಡಚಿ ಮನೇಲಿಟ್ಟರು. ಈಗ ಆ ಸಣ್ಣ ಹುಡುಗನ ಹಿಂದೆ ಓಡುತ್ತಾರೆ. ಆ ಹುಡುಗ ನಡೆದರೆ ಇವರೂ ನಡೀತಾರೆ, ಓಡಿದರೆ ಇವರೂ ಓಡುತ್ತಾರೆ. ಆತ ಕುಳಿತರೆ ಇವರೂ ಕೂರುತ್ತಾರೆ. ಹಿರಿಯ ನಾಯಕರಿಗೆ ಇದೆಲ್ಲಾ ಸರಿ ಹೊಂದುವುದಿಲ್ಲ ಎಂದು ವಗ್ದಾಳಿ ಮಾಡಿದರು.
ಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಪರಿವರ್ತನೆ ಆಗುತ್ತೆ. ಕಾಂಗ್ರೆಸ್ ನಾಯಕರ ಕನಸು ಕನಸಾಗಿಯೇ ಉಳಿಯಲಿದೆ. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ಜನ ನಿಮ್ಮನ್ನು ಬಿಡಲ್ಲ. ಕಾಂಗ್ರೆಸ್ಸಿಗರು ಈಗಿರುವ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ರಾಯಚೂರು ಜಿಲ್ಲೆಯಲ್ಲಿ ಏಳಕ್ಕೆ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ರಾಯಚೂರು ಜಿಲ್ಲೆಯಿಂದಲೇ ವಿಜಯ ಸಂಕಲ್ಪ ಶುರು ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
2023ಕ್ಕೆ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಿಸುವ ಸಂಕಲ್ಪ ಮಾಡಿದ್ದೇವೆ. ನಾವು ರೈತರು, ಬಡವರು, ವಿದ್ಯಾರ್ಥಿಗಳಿಗಾಗಿ ಯೋಜನೆ ಜಾರಿಗೆ ಮಾಡಿದ್ದೇವೆ. ನಮ್ಮ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದೆ. ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುತ್ತಿದ್ದೇವೆ ಎಂದು ತಿಳಿಸಿದರು.