ಬಸ್ಸಿನಲ್ಲಿ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯ! | JANATA NEWS

ವಿಜಯಪುರ : ಬಸ್ಸಿನಲ್ಲಿ ಶುರುವಾದ ಪ್ರೇಮ ಪ್ರಕರಣವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಪ್ರಿಯಕರನೊಂದಿಗೆ ಏಕಾಂತದಲ್ಲಿ ಇದ್ದುದನ್ನು ತಂದೆ ನೋಡಿದನೆಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಗಳ ಸಾವಿಗೆ ಕಾರಣನಾದ ಎಂದು ಹುಡುಗಿಯ ತಂದೆ ಪ್ರಿಯಕರನನ್ನು ಕೊಂದಿದ್ದಾನೆ. ಸೆ. 22ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಘಟನೆ -
ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದ ತಿಕೋಟಾ ತಾಲೂಕಿನ ಘೋಣಸಗಿಯ ಮಲ್ಲಿಕಾರ್ಜುನ (20) ಹಾಗೂ ಪ್ರಥಮ ವರ್ಷದ ಪದವಿ ಓದುತ್ತಿದ್ದ ಕಳ್ಳಕವಟಗಿ ಗ್ರಾಮದ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು.
ಇಬ್ಬರು ಒಂದೇ ಬಸ್ಸಿನಲ್ಲಿ ವಿಜಯಪುರದ ಕಾಲೇಜಿಗೆ ಬರುತ್ತಿದ್ದರು. ಅಕ್ಕಪಕ್ಕದ ಊರಿನವರಾದ್ದರಿಂದ ಬಸ್ಸಿನಲ್ಲಿ ಇಬ್ಬರಿಗೂ ಪರಿಚಯವಾಗಿ, ಪ್ರೇಮಕ್ಕೆ ತಿರುಗಿತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವಪ್ರೇಮಿಗಳ ವಿಷಯ ಎರಡೂ ಮನೆಗಳಲ್ಲಿ ತಿಳಿಯುತ್ತಲೇ ಪಂಚಾಯ್ತಿ ನಡೆಸಿ, ಬುದ್ದಿವಾದ ಹೇಳಲಾಗಿತ್ತು.
ಆದರೂ ಸೆ.22 ರಾತ್ರಿ ಕರೆ ಮಾಡಿದ್ದ ಹುಡುಗಿ ಮಲ್ಲುನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಗ್ರಾಮದ ಜಮೀನಿನಲ್ಲಿ ಇರುವ ಶೆಡ್ನಲ್ಲಿ ಇಬ್ಬರು ಇದ್ದರು. ಅವರ ಪಿಸುಮಾತುಗಳನ್ನು ಕೇಳಿಸಿಕೊಂಡ ಹುಡುಗಿ ಮನೆಯವರು ಬುದ್ಧಿ ಕಲಿಸಲೆಂದು ಹುಡುಗನನ್ನು ಶೆಡ್ನಲ್ಲಿ ಕೂಡಿ ಹಾಕಿದರು.
ಇದರಿಂದ ನೊಂದ ಯುವತಿ ವಿಷ ಸೇವಿಸಿ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನಿಂದ ಕಂಗಾಲಾದ ಅಪ್ರಾಪ್ತೆಯ ತಂದೆ ಯುವಕನ ಕೈಕಾಲು ಕಟ್ಟಿ, ಆತನಿಗೂ ಬಲವಂತವಾಗಿ ವಿಷ ಕುಡಿಸಿ, ಹತ್ಯೆ ಮಾಡಿದ್ದಾನೆ. ಅಲ್ಲದೇ ಇತರೆ ಕೆಲವರೊಂದಿಗೆ ಸೇರಿ ಇಬ್ಬರ ಶವಗಳನ್ನು ಜೀಪ್‍ನಲ್ಲಿ ಹಾಕಿಕೊಂಡು ಬಾಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರ್ತಿ-ಕೊಲ್ಹಾರ ಬಳಿ ಕೃಷ್ಣಾ ನದಿಗೆ ಎಸೆದು, ಸಾಕ್ಷನಾಶ ಮಾಡಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ತಿಕೋಟಾ ಠಾಣೆಯಲ್ಲಿ ದೂರು ದಾಖಲಿಸಿದ್ದ. ಮತ್ತೊಂದೆಡೆ ಯುವಕನ ಸುಳಿವು ಇರದಿದ್ದರಿಂದ ಆತನ ಮನೆಯವರು ಕಾಣೆ ಆಗಿದ್ದಾನೆಂದು ದೂರು ನೀಡಿದ್ದರು.
ದೂರು ಆಧರಿಸಿ ತನಿಖೆಗೆ ಇಳಿದ ಪೊಲೀಸರಿಗೆ, ಬಿಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಯವಕ ಶವವಾಗಿ ಪತ್ತೆಯಾಗಿದ್ದಾನೆ. ಯುವಕನ ಪೋಷಕರು ಕೃಷ್ಣಾ ನದಿ ತೀರದಲ್ಲಿ ಪತ್ತೆಯಾದ ಶವ ತಮ್ಮ ಮಗನದೆಂದು ಗುರುತಿಸಿದ್ದಾರೆ.
ಇದನ್ನು ಆಧರಿಸಿ ಬೀಳಗಿ ಪೊಲೀಸರು ಅಪ್ರಾಪ್ತೆಯ ತಂದೆ ಗುರಪ್ಪ, ಸಂಬಂಧಿ ಅಜಿತ್ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.