ಸಿದ್ಧರಾಮಯ್ಯ ಸರ್ಕಾರದ ಹಗರಣಗಳ ದಾಖಲೆಯನ್ನ ರಾಹುಲ್ ಗಾಂಧಿಗೆ ಕೊಡುವೆ: ಸಿಎಂ ಬೊಮ್ಮಾಯಿ | JANATA NEWS

ಬೀದರ್ : ಸಿದ್ದರಾಮಯ್ಯ ನೃತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಹಗರಣಗಳ ದಾಖಲೆಯನ್ಮು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸುವೆ. ಅದನ್ನು ನೋಡಿ ಅವರು ಯಾರ ಯಾರ ವಿರುದ್ಧ ಕ್ರಮಕೈಗೊಳ್ಳುತ್ತಾರೆ ನೋಡುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಔರಾದ ಪಟ್ಟಣದಲ್ಲಿ ಮಂಗಳವಾರ 'ಜನಸಂಕಲ್ಪ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದ ಅವರು, 2016ರ ಶಿಕ್ಷಕರ ನೇಮಕಾತಿ ಹಗರಣ, ಪ್ರಾಸಿಕ್ಯೂಟರ್ ಮತ್ತು ಪೊಲೀಸ್ ನೇಮಕಾತಿಯಲ್ಲಿನ ಹಗರಣ ಸೇರಿ ಎಲ್ಲ ದಾಖಲೆಗಳನ್ನು ರಾಹುಲ್‌ಗೆ ಕೊಡಲಿದ್ದೇನೆ. ಅರ್ಜಿ ಹಾಕದೇ ಶಿಕ್ಷಕರ ನೇಮಕಾತಿ ನಡೆದಿದ್ದು, ಇದರಲ್ಲಿ ಎಷ್ಟು ಪರ್ಸಂಟೇಜ್ ಹೊಡೆದಿರಬಹುದು? ಇದು ಕಾಂಗ್ರೆಸ್ ಸರ್ಕಾರದ ಆಡಳಿತ. ಆದರೆ, ನಾವು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಉನ್ನತ ಅಧಿಕಾರಿಗಳು ಸೇರಿ ತಪ್ಪು ಮಾಡಿದ್ದವರನ್ನು ಯಾರಿಗೂ ಬಿಡಲಿಲ್ಲ. ಸಿದ್ದರಾಮಯ್ಯ ಕೇವಲ ದೊಡ್ಡ ದೊಡ್ಡ ಮಾತನಾಡುತ್ತಾರಷ್ಟೇ, ಧಮ್ ಇಲ್ಲ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ಹೇಳಲು ರಾಹುಲ್ ಗಾಂಧಿಗೆ ಆತ್ಮಸಾಕ್ಷಿ ಬೇಕಲ್ಲವೇ ಎಂದು ಪ್ರಶ್ನಿಸಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಯಾರ ಸರ್ಕಾರ ಇದೆ, ನಿರ್ಣಯ ತೆಗೆದುಕೊಂಡವರು ಯಾರು ಅರಿಯಬೇಕು. ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೀನ ದಲಿತರಿಗೆ ಶೂನ್ಯ ಕೊಡುಗೆ ನೀಡಿದೆ ಎಂದು ಹೇಳಿದರು.