ಎಸ್‌ಟಿ, ಎಸ್‌ಸಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬಿಜೆಪಿಯ ಕಣ್ಣೊರೆಸುವ ತಂತ್ರ | JANATA NEWS

ಬೆಂಗಳೂರು : ಎಸ್‌ಟಿ, ಎಸ್‌ಸಿ ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ ಬಿಜೆಪಿ ಸರ್ಕಾರದ ನಡೆ ಕೇವಲ ಕಣ್ಣೊರೆಸುವ ತಂತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ವಿಚಾರವಾಗಿ ಮಾತನಾಡಿ, ಇದು ಬಿಜೆಪಿಯವರ ಕಣ್ಣೊರೆಸುವ ತಂತ್ರವಷ್ಟೇ. ನಾಗಮೋಹನ್ ದಾಸ್ ವರದಿ ಸಲ್ಲಿಕೆಯಾಗಿ ಎಷ್ಟು ವರ್ಷವಾಗಿತ್ತು? ಇಷ್ಟು ವರ್ಷವಾದರೂ ಏಕೆ ವರದಿ ಅನುಷ್ಠಾನಕ್ಕೆ ಮುಂದಾಗಿರಲಿಲ್ಲ ಎಂದು ಪ್ರಶ್ನಿಸಿದರು.
ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಮ್ಮ ಸರ್ಕಾರ. ವರದಿ ಬಂದು ಎಷ್ಟು ಸಮಯ ಆಯ್ತು. ಇವರಿಗೆ ಮೀಸಲಾತಿ ಕೊಡಬೇಕು ಎಂಬ ಇಚ್ಛೆ ಇದ್ದಿದ್ದರೆ ವರದಿ ಸಿಕ್ಕಿದ ಕೂಡಲೇ ಜಾರಿಗೆ ತರಬಹುದಿತ್ತು. ಈಗ ಯಾಕೆ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದರು ಎಂದು ಪ್ರಶ್ನಿಸಿದರು.
ನಾವು ವರದಿ ಜಾರಿಗೆ ಒತ್ತಾಯ ಮಾಡಿದ್ದೆವು. ಸದನದಲ್ಲಿ ನಿರಂತರವಾಗಿ ಒತ್ತಾಯ ಮಾಡಿದ್ದೆವು. ಈಗ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದರ ಬದಲು ವಿಶೇಷ ಅಧಿವೇಶನ ಕರೆಯಬೇಕಿತ್ತು. ಅಧಿವೇಶನ ಕರೆದು ಬಿಲ್ ಪಾಸ್ ಮಾಡಬೇಕಿತ್ತು. ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ಶೆಡ್ಯೂಲ್ 9ಗೆ ಸೇರಿಸಬೇಕಲ್ಲವೇ?. ಇವರು ಸಾಮಾಜಿಕ ನ್ಯಾಯದ ಪರವಾಗಿಲ್ಲ. ನಮ್ಮ ಹೋರಾಟದ ಫಲವಾಗಿ ನ್ಯಾಯ ಸಿಕ್ಕಿದೆ ಎಂದರು.
ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದರು.