ಬಂಡೇಮಠದ ಗುರು ಆತ್ಮಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು 6 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ | JANATA NEWS

ರಾಮನಗರ : ಜಿಲ್ಲೆಯ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಆರು ದಿನ ಪೊಲೀಸ್ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ಎ 1 ಆರೋಪಿ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಎ 2 ಆರೋಪಿ ನೀಲಾಂಬಿಕೆ, ಎ3 ಆರೋಪಿ ಮಹಾದೇವಯ್ಯ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಮಾಗಡಿ 1 ನೇ ಜೆಎಂಸಿ ಕೋರ್ಟ್ ನ್ಯಾಯಮೂರ್ತಿ ಧನಲಕ್ಷ್ಮೀ ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲಾ ಪೊಲೀಸರು ಮಾಗಡಿ 1ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಧನಲಕ್ಷ್ಮೀ ಎದುರು ಆರೋಪಿಗಳನ್ನು ಹಾಜರುಪಡಿಸಿದರು. ಪೊಲೀಸರ ಬೇಡಿಕೆಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲು ಸಮ್ಮತಿಸಿದರು. ಪ್ರಕರಣದ ಆರೋಪಿಗಳಾದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಮತ್ತು ವಕೀಲ ಮಹದೇವಯ್ಯ, ಹನಿಟ್ರ್ಯಾಪ್ನಲ್ಲಿ ಕಾಣಿಸಿಕೊಂಡಿದ್ದ ಯುವತಿ ನೀಲಾಂಬಿಕೆ (ಚಂದು) ಅವರನ್ನು ಹೆಚ್ಚಿನ ವಿಚಾರಣೆಗಾಗಿ ರಾಮನಗರ ಜಿಲ್ಲಾ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದರು.
ನವೆಂಬರ್ 5ರವರೆಗೂ ಆರೋಪಿಗಳು ಪೊಲೀಸರ ವಶದಲ್ಲಿರುತ್ತಾರೆ. ನಂತರ ಅವರನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗುತ್ತದೆ. ವಿಚಾರಣೆ ಅಗತ್ಯವಿದೆ ಎಂದಾದರೆ ಪೊಲೀಸರು ಅವರನ್ನು ಮತ್ತೆ ವಶಕ್ಕೆ ಕೇಳುತ್ತಾರೆ.