ಪರಪುರುಷನ ಜೊತೆ ಅಕ್ರಮ ಸಂಬಂಧ: ಗಂಡನ ಕೊಲೆ ಮಾಡಿ ಚರಂಡಿಗೆ ಶವ ಎಸೆದ ಹೆಂಡ್ತಿ | JANATA NEWS

ಬೆಂಗಳೂರು : ಪರಪುರುಷನ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮಹಿಳೆಯೊಬ್ಬರು ಪ್ರಿಯಕರನೊಂದಿಗೆ ಪ್ಲಾನ್ ಮಾಡಿ ಶವವನ್ನು ಮೋರಿಗೆ ಎಸೆದ ಘಟನೆ ನಡೆದಿದೆ.
ಬೆಂಗಳೂರಿನ ಸೋಮಶೆಟ್ಟಿಹಳ್ಳಿ ನಿವಾಸಿ ದಾಸೇಗೌಡ (48) ಕೊಲೆಯಾದ ವ್ಯಕ್ತಿ. ಈತನ ಪತ್ನಿ ಜಯಲಕ್ಷ್ಮಿ ಮತ್ತು ಈಕೆಯ ಪ್ರಿಯಕರ ರಾಜೇಶ್ ಆರೋಪಿಗಳಾಗಿದ್ದಾರೆ.
ಸೋಲದೇವಹಳ್ಳಿಯ ಠಾಣಾ ವ್ಯಾಪ್ತಿಯ ಫಾರ್ಮ್ಹೌಸ್ವೊಂದರಲ್ಲಿ ದಾಸೇಗೌಡ ಮತ್ತು ಜಯಲಕ್ಷ್ಮಿ ದಂಪತಿ ಕೆಲಸ ಮಾಡುತ್ತಿದ್ದರು. ಇಬ್ಬರಿಗೂ ವಿವಾಹವಾಗಿ 16 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಜಯಶ್ರೀಗೆ ರಾಜೇಶ್ ಪರಿಚಯವಾಗಿ ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಗಂಡ ಮನೆಯಲ್ಲಿ ಇಲ್ಲದಿರುವಾಗ ಆಗಾಗ ರಾಜೇಶ್ ಬಂದು ಹೋಗುತ್ತಿದ್ದ. ಈ ವಿಚಾರ ತಿಳಿದು ಗಂಡ ಪತ್ನಿಯೊಂದಿಗೆ ಜಗಳವಾಡಿದ್ದ. ಜಯಶ್ರೀ ಪ್ರಿಯಕರ ರಾಜೇಶ್ ಬಳಿ ಹೇಳಿಕೊಂಡಿದ್ದಳು. ಇಬ್ಬರು ದಾಸೇಗೌಡನನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಬಳಿಕ ಹಿಂಬಾಗಿಲಿನ ಮೂಲಕ ಮನೆಗೆ ಹೊಕ್ಕಿದ್ದ ಪ್ರಿಯಕರ ದನದ ಕೊಟ್ಟಿಗೆಯಲ್ಲಿನ ಹಗ್ಗ ತಂದು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಇಬ್ಬರು ಸೇರಿಕೊಂಡು ಬಳಿಕ ಕೈ ಕಾಲುಗಳಿಗೆ ಹಗ್ಗ ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಶವವಿರಿಸಿ ಕಾರಿನಲ್ಲಿ ತೆರಳಿದ್ದಾರೆ.
ಆರೋಪಿಗಳು ಶವವನ್ನು ಕಾರಿನಲ್ಲಿ ಕೊಂಡೊಯ್ದು ಮೈಸೂರು ಬೆಂಗಳೂರು ಹೆದ್ದಾರಿಯ ಮೋರಿಯಲ್ಲಿ ಎಸೆದಿದ್ದರು. ಮೋರಿಯಲ್ಲಿ ಸುಮಾರು 50 ಮೀಟರ್ನಷ್ಟು ದೂರಕ್ಕೆ ಶವವನ್ನು ತುರುಕಿದ್ದ ಆರೋಪಿಗಳು, ಮೊಬೈಲ್ಫೋನ್ನನ್ನು ಅಲ್ಲಿಂದ 500 ಮೀಟರ್ ದೂರದಲ್ಲಿ ಎಸೆದಿದ್ದರು.
ಬಳಿಕ ಮನೆಗೆ ಬಂದು ಮಾರನೇ ದಿನ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಜಯಶ್ರೀ ದೂರು ನೀಡಿದ್ದಳು. ವಿಚಾರಣೆ ವೇಳೆ ಪ್ರಿಯಕರನನ್ನು ತಮ್ಮ ಎಂದು, ಪ್ರಿಯಕರ ಜಯಲಕ್ಷ್ಮೀಯನ್ನು ಅಕ್ಕ ಎಂದಿದ್ದರು. ಆದರೆ ಪತ್ನಿಯ ಕಾಲ್ ಡಿಟೇಲ್ಸ್ ತೆಗೆದು ಪರಿಶೀಲನೆ ನಡೆಸಿದಾಗ ಅತಿಹೆಚ್ಚಿನ ಕರೆ ಪ್ರಿಯಕರನಿಗೆ ಹೋಗಿದ್ದು ಗೊತ್ತಾಗಿದ್ದು, ಆ ಬಳಿಕ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಅಸಲಿಯತ್ತು ಹೊರಬಿದ್ದಿದೆ.