ಬಿಜೆಪಿಗೆ ಸೇರಲು ಮುಂದಾದ ರೌಡಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ | JANATA NEWS

ಬೆಂಗಳೂರು : ಬಿಜೆಪಿಗೆ ಸೇರಲಿರುವ ಒಂದಷ್ಟು ರೌಡಿಶೀಟರ್ಗಳ ಪಟ್ಟಿಯನ್ನು ಕಾಂಗ್ರೆಸ್ ಇಂದು ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಇನ್ನೂ 24 ರೌಡಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು ಎಂದೂ ಪಕ್ಷ ಹೇಳಿದೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮೊದಲ ಹಂತದಲ್ಲಿ ಈಗಾಗಲೇ 36 ರೌಡಿಶೀಟರ್ ಗಳು ಬಿಜೆಪಿ ಸೇರ್ಪಡೆ ಆಗಿದ್ದಾರೆ. 24 ರೌಡಿಗಳ ಸೇರ್ಪಡೆ ಬಾಕಿ ಇದೆ. ರಾಜ್ಯದಲ್ಲಿ ಒಟ್ಟು 150 ರೌಡಿಗಳನ್ನು ಸೇರಿಸಿಕೊಳ್ಳಲು ಬಿಜೆಪಿಯನರು ಪಟ್ಟಿ ಮಾಡಿದ್ದಾರೆ ಎಂದು ಆರೋಪ ಮಾಡಿದರು.
36 ರೌಡಿಗಳ ಪೈಕಿ ಸೈಲೆಂಟ್ ಸುನೀಲ್ ಹಾಗೂ 9 ಇತರರು. ವಿಲ್ಸನ್ ಗಾರ್ಡನ್ ನಾಗ ಹಾಗೂ 6 ಇತರರು, ನಾಗಮಂಗಲದ ಫೈಟರ್ ರವಿ ಹಾಗೂ 5 ಇತರರು, ಬೆತ್ತನಗೆರೆ ಶಂಕರ ಹಾಗೂ 8 ಇತರರು, ಈತ ಹೆಸರು ಬದಲಾವಣೆ ಮಾಡಿಕೊಂಡು ನಲ್ಲೂರು ಶಂಕರೇಗೌಡ ಎಂದು ಪಕ್ಷ ಸೇರ್ಪಡೆ ಆಗಿದ್ದಾನೆ.
ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿದ್ದರಾಜು ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾನೆ. ಒಂಟೆ ರೋಹಿತ್ ಹಾಗೂ ಇತರರು, ಕುಣಿಗಲ್ ಗಿರಿ ಈತ ಜೈಲಿನಲ್ಲಿದ್ದು, ಅಲ್ಲಿಂದಲೇ ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಮಂಜುನಾಥ್ ಅಲಿಯಾಸ್ ಉಪ್ಪಿ, ಸೈತಾನ್ ರವಿ (ಸಿ.ಟಿ ರವಿ), ಈತ ಹಾಲಿ ಶಾಸಕರು, ಇನ್ನು ಪ್ರತಾಪ್ ಸಿಂಹ, ಇವರನ್ನು ಸುಮಲತಾ ಅವರು ಪೇಟೆ ರೌಡಿ ಎಂದು ಕರೆದಿದ್ದಾರೆ. ಕೊನೆಯದಾಗಿ ಕಿರಣ್ ಗೌಡ, ಈತ ಯುವ ದಸರಾಗೆ ಅಧ್ಯಕ್ಷರಾಗಿದ್ದು, ಪ್ರತಾಪ್ ಸಿಂಹ ಅವರ ಹಿಂಬಾಲಕ. ಮುಂದಿನ ಹಂತದಲ್ಲಿ ಉಳಿದ 24 ರೌಡಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು.
2018ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿ ಮುಕ್ತಾಯವಾದ ನಂತರ ಪೊಲೀಸ್ ಇಲಾಖೆ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 23 ಸಾವಿರ ರೌಡಿಗಳಿದ್ದರು. 2022ರ ಜೂನ್ ವೇಳೆಗೆ ಹಾಲಿ ರೌಡಿಗಳ ಸಂಖ್ಯೆ 33 ಸಾವಿರ ಆಗಿದೆ. 2018ರಲ್ಲಿ ಬೆಂಗಳೂರಿನಲ್ಲಿ 3 ಸಾವಿರ ರೌಡಿಗಳಿದ್ದರು. ಈಗ ಆ ಸಂಖ್ಯೆ 6620ಕ್ಕೆ ಏರಿದೆ. ಬೆಂಗಳೂರಿನಲ್ಲಿ ಒಟ್ಟು 188 ಠಾಣೆಗಳ 6620 ರೌಡಿಗಳಿದ್ದಾರೆ. ಇನ್ನು ಸಕ್ರಿಯ ರೌಡಿಗಳ ಸಂಖ್ಯೆ ಬೆಂಗಳೂರಿನಲ್ಲಿ 1 ಸಾವಿರ ಇದ್ದರೆ ರಾಜ್ಯದಲ್ಲಿ 8 ಸಾವಿರ ಇದೆ ಎಂದು ಅವರು ತಿಳಿಸಿದರು.