ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ನಿರ್ಮಾಣ! | JANATA NEWS

ಬೆಳಗಾವಿ : ರಾಜ್ಯದಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಬೆಳಗಾವಿ ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ವಾಹನ ಖರೀದಿ ಪೊಲೀಸ್ ಗೃಹ ಮಂಡಳಿಯಿಂದ ರಾಜ್ಯಾದ್ಯಂತ ಒಳ್ಳೆಯ ಕೆಲಸ ಆಗುತ್ತಿದೆ. ರಾಜ್ಯದಲ್ಲಿ 2500 ಪೊಲೀಸ್ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ 16 ಪೊಲೀಸ್ ಠಾಣೆ ನಿರ್ಮಾಣದ ಹಂತದಲ್ಲಿವೆ. ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಸುಮಾರು 80 ಕೋಟಿ ರೂ.ಗಳ ವೆಚ್ಚದಲ್ಲಿ 300 ಜೀಪ್ ಹಾಗೂ ಸ್ಕಾರ್ಪಿಯೊ ಖರೀದಿ ಮಾಡಲಾಗುತ್ತಿದೆ. ಡಿವೈ ಎಸ್ಪಿಗಳಿಗೆ ಸ್ಕಾರ್ಪಿಯೊ ವಾಹನಗಳನ್ನು ನೀಡಲಾಗುತ್ತಿದೆ ಎಂದರು.
ಕರ್ನಾಟಕ ಪೊಲೀಸ್ ಪಡೆಗೆ ಅಭಿನಂದನೆ ಸಲ್ಲಿಸಿದ ಅವರು, ಗೃಹ ಇಲಾಖೆ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದೆ ಎಂದರು. ಗಡಿ ಭಾಗದಲ್ಲಿ ಕೇವಲ ಶಕ್ತಿ ಪ್ರದರ್ಶನ ಮಾಡುವುದಲ್ಲ. ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಗಡಿ ಭಾಗದ ಸಮಸ್ಯೆ ಪರಿಹರಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.