ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ: ಹೆಚ್ಡಿಕೆ | JANATA NEWS

ಬೆಂಗಳೂರು : ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನೀವು ಸರ್ವಾಧಿಕಾರಿ ಹಿಟ್ಲರ್ನ ಸಂಪುಟದ ಗೊಬೆಲ್ಲನ ಹೊಸ ಅವತಾರ. ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಅಮಿತ್ ಶಾ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ವಿಕಲಚೇತನರ ಎಟಿಎಂ ಆಗುತ್ತದೆ. ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ಎನಿ ಟೈಮ್ ಮನುಷ್ಯತ್ವ ಎಂದು. ನಿಮ್ಮ ಪಾಲಿಗೆ ಅದು ಎನಿ ಟೈಮ್ ಮೋಸ. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಶಾ ಅವರೇ, ದೇಶದ ಮಾತು ಹಾಗಿರಲಿ, ಕರ್ನಾಟದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ ಎಂದು ತಿರುಗೇಟು ನೀಡಿದ್ದಾರೆ.
40% ಕಮೀಷನ್, ಪಿಎಸ್ ಐ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ, ಸಹ ಪ್ರಾಧ್ಯಾಪಕರ ನೇಮಕ ಹಗರಣ, ವೈದ್ಯ ಪ್ರಾಧ್ಯಾಪಕರ ನೇಮಕ ಹಗರಣ, ಕೋವಿಡ್ ನಲ್ಲಿ ಕೊಳ್ಳೆ, ಕಾಸಿಗಾಗಿ ಪೋಸ್ಟಿಂಗ್ ,ಗಂಗಾಕಲ್ಯಾಣ ಕರ್ಮಕಾಂಡ, ಚಿಲುಮೆ ಹಗರಣ. ಇದು ಅಪೂರ್ಣ ಪಟ್ಟಿ, ಅದು ಕೂಡ ದೊಡ್ಡದಿದೆ!! ಬೇಕಾ ಅಮಿತ್ ಶಾ ಅವರೇ? ಎಂದು ಸವಾಲು ಹಾಕಿದ್ದಾರೆ.