ಹೊಸವರ್ಷದ ಪಾರ್ಟಿ ವೇಳೆ ಗನ್ ಫೈರ್, ಗುಂಡು ತಗುಲಿ ಯುವಕ ಬಲಿ, ಫೈರಿಂಗ್ ಮಾಡಿದ ವ್ಯಕ್ತಿಯೂ ಸಾವು | JANATA NEWS

ಶಿವಮೊಗ್ಗ : ಹೊಸ ವರ್ಷದ ಪಾರ್ಟಿ ವೇಳೆ ಗುಂಡು ತಗುಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ನಂತರ ಗುಂಡು ಹಾರಿಸಿದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ.
ವಿದ್ಯಾನಗರದ ಮಂಜುನಾಥ್ ಓಲೇಕರ್ ಮತ್ತು ಹೊಸನಗರ ಮೂಲದ ವಿನಯ್ (34) ಮೃತರೆಂದು ತಿಳಿದುಬಂದಿದೆ. ಮಂಜುನಾಥ್ ಶಿವಮೊಗ್ಗದ ಗೋಪಾಲ ಗ್ಲಾಸ್ ಹೌಸ್ನ ಮಾಲೀಕರಾಗಿದ್ದು, ತಮ್ಮ ಮನೆಯಲ್ಲೇ ಹೊಸ ವರ್ಷದ ಆಚರಣೆಗಾಗಿ ಶಾಮಿಯಾನ್ ಹಾಕಿಸಿ ಪಾರ್ಟಿ ಆಯೋಜಿಸಿದ್ದರು.
ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಮಂಜುನಾಥ್ ಓಲೇಕರ್ ತಮ್ಮ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಅದು ಮಿಸ್ ಆಗಿ ಪಾರ್ಟಿಗೆ ಬಂದಿದ್ದ ವಿನಯ್ ಎಂಬ ಯುವಕನಿಗೆ ತಾಗಿದೆ. ಗಾಯಗೊಂಡ ವಿನಯ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಹಾರಿಸಿದ ಗುಂಡು ಪುತ್ರನ ಸ್ನೇಹಿತನಿಗೆ ತಾಗಿತು ಎಂದು ಆತಂಕಗೊಂಡ ಮಂಜುನಾಥ್ ಓಲೇಕರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.