ಕಾಲೇಜೊಂದರಲ್ಲಿ ಹಾಡಹಗಲೇ ಯುವತಿಗೆ ಚುಚ್ಚಿ ಚುಚ್ಚಿ ಕೊಂದ ಯುವಕ | JANATA NEWS

ಬೆಂಗಳೂರು : ಹಾಡಹಗಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿರುವಂತಹ ಘಟನೆ ನಗರದ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದಿದೆ.
ಕಾಶಿಪುರ ಗ್ರಾಮದ ಲಯಸ್ಮಿತಾ(19) ಕೊಲೆಯಾದ ವಿದ್ಯಾರ್ಥಿನಿ. ಮೃತ ಲಯಸ್ಮಿತಾ ರಾಜಾನುಕುಂಟೆ ಇಟ್ಗಲ್ಪೂರ್ ಪ್ರೆಸಿಡೆನ್ಸಿ ಯೂನಿವರ್ಸಿಟಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಹೊಟ್ಟೆ, ಎದೆ ಭಾಗ, ಕೈಗಳಿಗೆ ಚುಚ್ಚಿ ಕೊಲೆ ಮಾಡಲಾಗಿದೆ. ಚಾಕು ಇರಿತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆಯೇ ಸಾವನ್ನಪ್ಪಿದ್ದಾಳೆ.
ಪ್ರೀತಿ ಪ್ರೇಮದ ವಿಚಾರಕ್ಕೆ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರೂ ವಿದ್ಯಾರ್ಥಿಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕಾಶಿಪುರ ನಿವಾಸಿಗಳು. ಕಲ್ಯಾಣ್ ನೃಪತುಂಗ ಯೂನಿವರ್ಸಿಟಿಯ ಮೊದಲ ವರ್ಷದ ಬಿಸಿಎ ವಿದ್ಯಾರ್ಥಿ.
ಮೃತ ವಿದ್ಯಾರ್ಥಿನಿಯು ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಪ್ರೀಯಕರ ಪವನ್ ಕಲ್ಯಾಣ್ ಏಕಾಏಕಿ ಕಾಲೇಜಿಗೆ ನುಗ್ಗಿದ್ದಾನೆ. ಆಕೆಯ ಕತ್ತಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ತಾನು ಕೂಡ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.