ಕನ್ನಡಕ್ಕೆ ಆಪತ್ತು ತರುವ ಶಕ್ತಿ ಇನ್ನೂ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ | JANATA NEWS

ಹಾವೇರಿ : ಹಾವೇರಿಯಲ್ಲಿ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದಕ್ಕೆ ಆಪತ್ತು ತರುವ ಯಾವುದೇ ಶಕ್ತಿ ವಿಶ್ವದಲ್ಲಿ ಇನ್ನೂ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ ಎಂದು ಹೇಳಿದರು.
ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಕನ್ನಡಿಗರ ಬದುಕು. ಪುರಾತನ, ಪ್ರಾಚನ, ಶ್ರೇಷ್ಠವಾದುದು. ಇಡೀ ಜಗತ್ತಿನಲ್ಲಿ ಕನ್ನಡದ ಸಂಸ್ಕೃತಿ ಅತ್ಯಂತ ಶ್ರೇಷ್ಠ ಮತ್ತು ಪರಂಪರೆ ಹಾಗೂ ಚರಿತ್ರೆ ಇರುವಂಥದ್ದು. ಕನ್ನಡದ ಸಂಸ್ಕೃತಿಗೆ ದೊಡ್ಡ ಶಕ್ತಿ, ಅರ್ಥ, ಭಾವನೆಗಳನ್ನು ತುಂಬಿ ಹಾಗೂ ಬದುಕನ್ನು ಕೊಟ್ಟಿರುವುದು ಕನ್ನಡದ ಸಾಹಿತ್ಯ ಲೋಕ.
ಕನ್ನಡದ ಸಂಸ್ಕೃತಿಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದ್ದು ಇದನ್ನು ಗುರುತಿಸಿ ಬೆಳೆಸಿಕೊಂಡು ಹೋಗಬೇಕಾದ್ದು ಈ ಸಮ್ಮೇಳನಗಳ ಉದ್ದೇಶ. ಕನ್ನಡದ ಕಿಚ್ಚನ್ನು ಮತ್ತೊಮ್ಮೆ ಹಚ್ಚಿ, ಕನ್ನಡ ಕಂಪನ್ನು ಎಲ್ಲೆಡೆ ಪಸರಿಸಬೇಕು. ಕನ್ನಡವನ್ನು ಆಳವಾಗಿ ಭಾರತದಲ್ಲಿ ಬಿತ್ತಬೇಕು. ಅದು ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಈ ಉದ್ದೇಶಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂದರು.
ಇಡೀ ದೇಶದಲ್ಲಿ ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ದೇಶದ ಬೇರೆ ಯಾವ ಭಾಷೆಗೂ ಸಹ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ. ಒಂದು ಭಾಷೆ ಒಂದು ಸಂಸ್ಕೃತಿ ಬೆಳೆಯಬೇಕಂದರೇ ಇದುವರೆಗೆ ನಡೆದ ಬಂದ ದಾರಿಯ ಸಿಂಹಾವಲೋಕನ ಮಾಡಬೇಕಾಗುತ್ತದೆ.
ಆಗ ಅದು ಮುಂದಿನ ದಾರಿಯನ್ನು ನಿರ್ಧರಿಸುತ್ತದೆ ಎಂದರು. ಇಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರು ಸಹ ನಮ್ಮ ಕನ್ನಡ ನಾಡಿನಲ್ಲಿರುವುದು ವಿಶೇಷವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ತಮ್ಮ ಹೆಸರಿನಂತೆಯೇ ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಪ್ರೊ.ದೊಡ್ಡರಂಗೇಗೌಡರು ತಮ್ಮ ಹೆಸರಿಗೆ ಅನ್ವರ್ಥವಾಗುವಂತಹ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಪರಿಪೂರ್ಣ ಸಾಹಿತಿ. ಮಾನವೀಯತೆಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಂಡು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸುವ ಕೆಲಸವನ್ನು ಅವರ ಸಾಹಿತ್ಯ, ಕವಿತೆಗಳಲ್ಲಿ, ಹಾಡುಗಳಲ್ಲಿ ಕಂಡುಬರುತ್ತದೆ. ಸಾಹಿತ್ಯ, ಸಿನಿಮಾ ಮತ್ತು ಇತರ ರಂಗದಲ್ಲಿಯೂ ಖ್ಯಾತಿ ಪಡೆದು ದೊಡ್ಡ ಹೃದಯ ಹೊಂದಿದವರು ಎಂದರು.
ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿವೆ ಹಾಗೂ ಕನ್ನಡದ ಅಂತಃಸತ್ವ ಹೆಚ್ಚಿಸಿವೆ. ಕನ್ನಡದ ಭಾಷೆಯಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ವಿವಿಧ ಆಯಾಮಗಳಲ್ಲಿಯೂ ಕನ್ನಡ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಹರಿದು ಹೋದ ಹೃದಯಗಳನ್ನು ಒಂದಾಗಿಸಿದ್ದು ನಮ್ಮ ಕನ್ನಡ. ಏಕೀಕರಣದ ಬಳಿಕ ನಮ್ಮದೇಯಾದ ರಾಜ್ಯ ಜೋಡಣೆಯಾಗಿದೆ.
ಉತ್ತರ ಕರ್ನಾಟಕ ಎಲ್ಲಾ ಮುಖಂಡರು ಹೋರಾಟ ಮಾಡಿದಾಗ, ಕುವೆಂಪು ಮತ್ತೆಲ್ಲರೂ ಸೇರಿ ಕನ್ನಡವನ್ನು ಒಂದು ಮಾಡಿದ್ದಾರೆ. ಹಾವೇರಿಯ ಸಿದ್ದಪ್ಪ ಹೊಸಮನಿ, ಅಂಗಾರಪ್ಪ ದೊಡ್ಡಮೇಟಿ, ಗುದ್ಲೆಪ್ಪ ಹಳ್ಲಿಕೇರಿ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಇವರೆಲ್ಲರೂ ಏಕೀಕರಣ ಹೋರಾಟದ ಮುಂಚೂಣಿಯಲ್ಲಿದ್ದವರು. ಇವರೆಲ್ಲರ ಹೋರಾಟದ ಪರಿಣಾಮವಾಗಿ ಇಂದು ಕನ್ನಡ ಭಾಷೆ, ಕನ್ನಡ ಒಂದಾಗಿದೆ.
ಈ ಹೋರಾಟ ಸ್ವತಂತ್ರ ಹೋರಾಟದಿಂದ ಬಂದದ್ದು. ಹಾವೇರಿಯ ಮೈಲಾರ ಮಹದೇವಪ್ಪನವರ ಹೋರಾಟ, ತ್ಯಾಗ, ಬಲಿದಾನ ಎಂದೂ ಮರೆಯಲು ಸಾದ್ಯವಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿ ಕನ್ನಡಿಗರ ಭಾವನೆಯನ್ನು ಒಗ್ಗೂಡಿಸಿದ್ದಾರೆ. ಎಲ್ಲಾ ಭಾವನೆಗಳಲ್ಲೂ ನಮ್ಮ ಒಡಲಾಳದಲ್ಲಿ ಇರಿಸಿಕೊಂಡು ಮುಂದುವರೆಯುತ್ತಿದ್ದೇವೆ ಎಂದರು.
ಕೈಗಾರಿಕೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಪ್ರಾಶಸ್ತ್ಯ ದೊರೆತು ಎಲ್ಲ ಕನ್ನಡಿಗರ ಕೈಗಳಿಗೆ ಕೆಲಸ ನೀಡುವ ಉದ್ಯೋಗ ನೀತಿಯ ತೀರ್ಮಾನವನ್ನು ರಾಜ್ಯದ ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗುವುದು ಎಂದರು.
ಗಡಿಭಾಗದ ಹಾಗೂ ಗಡಿಯಾಚೆಗಿನ ಕನ್ನಡಿಗರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.ಅದಕ್ಕಾಗಿ ವಿಶೇಷ ಅನುದಾನ ನೀಡಲಾಗುವುದು. ಮೂಲಭೂತಸೌಕರ್ಯ ಸೇರಿದಂತೆ ಗಡಿಭಾಗಗಳ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸುವಂತಹ, ಶಾಲೆಗಳನ್ನು ಉಳಿಸುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದರು.