ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ :ಡಿಕೆ ಶಿವಕುಮಾರ್ ಘೋಷಣೆ | JANATA NEWS

ಬೆಳಗಾವಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿಮಕುಮಾರ್ ಹೇಳಿದರು.
ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ.
ಬಿಜೆಪಿಯವರು ಎಲ್ಲರ ಬದುಕಿನಲ್ಲಿ ಚೆಲ್ಲಾಟ ಆಡಿಕೊಂಡು ಬಂದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ರೈತರ ಆದಾಯ ಡಬಲ್ ಆಗಲಿಲ್ಲ, ಸಾಲಮನ್ನಾವೂ ಆಗಲಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಪಾಪದಪುರಾಣ ಬಿಡುಗಡೆ ಮಾಡಿದ್ದೇವೆ. ಲಂಚಾವತಾರ, ಮಂಚಾವತಾರ, ಬಿ ರಿಪೋರ್ಟ್ ನೀಡುವ ಸರ್ಕಾರ, ಬಿಜೆಪಿಯವರು ಕೋಮು ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷ ಜನರ ಸಮಸ್ಯೆ, ನೋವು ಅಭಿಪ್ರಾಯ ಸಂಗ್ರಹಿಸುತ್ತಿದೆ. ನಿಮಗೆ ಶಕ್ತಿ ಕೊಡಬೇಕು. ಬೆಳಕು ಕೊಡಬೇಕು ಅಂತಾ ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆ. ಬುದ್ಧ, ಬಸವ ಮನೆ ಬಿಟ್ಟ ಘಳಿಗೆ, ಮಹಾತ್ಮ ಗಾಂಧಿ ನಾಯಕತ್ವ ವಹಿಸಿಕೊಂಡ ಘಳಿಗೆಯಲ್ಲಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ ಎಂದರು.
ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ.ಇದು ಕಾಂಗ್ರೆಸ್ ಗ್ಯಾರಂಟಿ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪೂರ್ವ ಭರವಸೆ ನೀಡಿದೆ.
ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಕರ್ನಾಟಕ, ಇದು ಕಾಂಗ್ರೆಸ್‌ನ ಸದಾಶಯ. 2022ರ ಒಂದೇ ವರ್ಷದ ಅವಧಿಯಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ ಬಿಜೆಪಿ ಸರ್ಕಾರ 4 ವರ್ಷದಲ್ಲಿ 8ಕ್ಕೂ ಹೆಚ್ಚು ಬಾರಿ ದರ ಏರಿಸಿದೆ. ಮುಂದಿನ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಬೆಳಕಾಗಲಿದೆ ಎಂದು ಟ್ವೀಟ್ ಮಾಡಿದೆ.