ಕಳಸಾ-ಬಂಡೂರಿ ಯೋಜನೆಗೆ ಕಾನೂನಿನ ಪ್ರಕಾರವೇ ಅನುಮೋದನೆ ಸಿಕ್ಕಿದೆ: ಸಿಎಂ ಬೊಮ್ಮಾಯಿ | JANATA NEWS

ಹುಬ್ಬಳ್ಳಿ : ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನನಗೆ ಗೊತ್ತಿಲ್ಲ. ಕಾನೂನು ಹೋರಾಟದ ಬಳಿಕವೇ ಡಿಪಿಆರ್ ದೊರೆಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಳಸಾ-ಬಂಡೂರಿ ಯೋಜನೆಗೆ ಮಹದಾಯಿ ನದಿ ನೀರನ್ನು ಬಳಸಿಕೊಳ್ಳುವ ಕುರಿತು ಗೋವಾ ಸರ್ಕಾರ ಕಾನೂನು ಹೋರಾಟ ನಡೆಸಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರವು ವಿಸ್ತೃತ ಯೋಜನಾ ವರದಿಗೆ ಎಲ್ಲಾ ಕಾನೂನು ಹೋರಾಟಗಳ ಬಳಿಕವೇ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.
ಗೋವಾ ಸರ್ಕಾರದ ಯೋಜನೆಗಳೇನು ಎಂಬುದು ನಮಗೆ ತಿಳಿದಿಲ್ಲ. ಈಗಾಗಲೇ ಕಾನೂನು ಹೋರಾಟ ನಡೆದಿದ್ದು, ಸುಪ್ರೀಂ ಕೋರ್ಟ್ ಆದೇಶದ ಆಧಾರದ ಮೇಲೆ ನ್ಯಾಯಮಂಡಳಿ ರಚಿಸಲಾಗಿದೆ.
ಟ್ರಿಬ್ಯುನಲ್ 10 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಂತರ ಪ್ರತಿಯೊಂದು ವಿಷಯ ಮತ್ತು ಆಯಾಮಗಳನ್ನು ಪರಿಶೀಲಿಸಿದೆ. ಜಲವಿಜ್ಞಾನ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡಿದ ನಂತರ ನ್ಯಾಯಮಂಡಳಿ ಆದೇಶ ನೀಡಿದೆ ಎಂದು ಹೇಳಿದರು.
ನ್ಯಾಯಾಧೀಕರಣ ಎಂದರೆ ಸುಪ್ರೀಂ ಕೋರ್ಟ್ ಆದೇಶವಿದ್ದಂತೆ. ಅದರನ್ವಯ ಕೇಂದ್ರ ಸರ್ಕಾರ ಡಿಪಿಆರ್ ಗೆ ಅನುಮತಿ ನೀಡಿದ್ದು, ಹಂತ ಹಂತವಾಗಿ ಕಾನೂನು ಪ್ರಕಾರವೇ ಯೋಜನೆ ಮಾಡಲಾಗುವುದು ಎಂದರು.